ಟೋಲ್ ವಿರುದ್ಧ ಹೋರಾಟಗಾರನ ಮೇಲೆ ಮಂಗಳಮುಖಿಯರ ದಾಳಿ; ಆರು ಜನರ ಬಂಧನ
ಮಂಗಳೂರು, ಫೆಬ್ರವರಿ 16: ಕಳೆದ ಹತ್ತು ದಿನಗಳಿಂದ ಮಂಗಳೂರು ನಗರ ಹೊರವಲಯದ ಸುರತ್ಕಲ್ ಟೋಲ್‌ಗೇಟ್ ತೆರವಿಗಾಗಿ ಹೆದ್ದಾರಿ ಬಳಿ ಪ್ರತಿಭಟನೆ ಮಾಡುತ್ತಿರುವ ಆಪತ್ಭಾಂಧವ ಆಸೀಫ್ ಮೇಲೆ ಮಂಗಳಮುಖಿಯರ ತಂಡ ದಾಳಿ ಮಾಡಿದೆ.
ಮಂಗಳವಾರ ತಡರಾತ್ರಿ ಸುಮಾರು ಆರು ಮಂದಿಯ ತಂಡ ದಾಳಿ ಮಾಡಿದ್ದು, ಬೆತ್ತಲಾಗಿ ಅಸಭ್ಯವಾಗಿ ವರ್ತಿಸಿ, ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಮಂಗಳಮುಖಿಯರ ವಿರುದ್ಧ ಆಸಿಫ್ ಪೊಲೀಸ್ ದೂರು ನೀಡಿದ್ದು, ಆರು ಮಂದಿಯ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರತ್ಕಲ್ ಟೋಲ್ ಗೇಟ್‌ನಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹವಾಗುತ್ತಿದೆಯೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಆಪತ್ಬಾಂಧವ ಅಂತಾನೇ ಖ್ಯಾತಿಯಾಗಿರುವ ಆಸೀಫ್ ಕಳೆದ ಹತ್ತು ದಿನಗಳಿಂದ ಟೋಲ್ ಗೇಟ್ ಸಮೀಪ ಹೆದ್ದಾರಿ ಬದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಆಸೀಫ್ ಪ್ರತಿ ದಿನವೂ ವಿಭಿನ್ನವಾಗಿ ಪ್ರತಿಭಟಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದು, ಅಕ್ರಮ ಟೋಲ್ ಸಂಗ್ರಹ ನಿಲ್ಲಿಸುವವರೆಗೂ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.

ಈ ನಡುವೆ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಆಸೀಫ್ ಮೇಲೆ ಮಂಗಳವಾರ ತಡರಾತ್ರಿ ಮಂಗಳಮುಖಿಯರ ತಂಡ ದಾಳಿ ಮಾಡಿದೆ. ರಾತ್ರಿ ಸುಮಾರು 12.30ರ ವೇಳೆ ಆಸೀಫ್ ಹೋರಾಟ ಮಾಡುತ್ತಿದ್ದ ವೇದಿಕೆಯ ಬಳಿ ಆಗಮಿಸಿದ ಮಂಗಳಮುಖಿಯರ ತಂಡ ಆಸೀಫ್ ಮೇಲೆ ದಾಳಿಗೆ ಯತ್ನಿಸಿದೆ. ನಗ್ನವಾಗಿ, ಅಂಗಾಂಗವನ್ನು ಪ್ರದರ್ಶಿಸುತ್ತಾ, ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೇಳೆ ಆಸೀಫ್ ಮತ್ತು ಮಂಗಳಮುಖಿಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪೊಲೀಸರು ಮಂಗಳಮುಖಿಯರನ್ನು ಚದುರಿಸಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ಈ ಹೈಡ್ರಾಮ ನಡೆದಿದ್ದು, ಟೋಲ್ ಸಂಗ್ರಹಕಾರರು ತಮ್ಮ ಮೇಲೆ ದಾಳಿ ಮಾಡುವುದಕ್ಕೆ ಮಾಡಿದ ವ್ಯವಸ್ಥಿತ ಸಂಚು ಇದು ಎಂದು ಆಸೀಫ್ ಆರೋಪಿಸಿದ್ದಾರೆ. ಮಂಗಳಮುಖಿಯರು ಮದ್ಯಪಾನ ಮಾಡಿದ್ದು, ರಾತ್ರಿ ವೇಳೆ ಸುರತ್ಕಲ್ ಟೋಲ್ ಬಳಿ ವಾಹನಗಳನ್ನು ಅಡ್ಡ ಹಾಕಿ ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಗಳಮುಖಿಯರ ದಾಳಿಯ ಸಂದರ್ಭದಲ್ಲಿ ಆಸೀಫ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಲೈವ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಸೀಫ್ ಮೇಲಿನ ದಾಳಿಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಹಿನ್ನಲೆಯಲ್ಲಿ ಸುರತ್ಕಲ್ ಠಾಣಾ ಪೊಲೀಸರು ಆಸೀಫ್ ಪ್ರತಿಭಟನಾ ಸ್ಥಳದಿಂದಲೇ ದೂರನ್ನು ಸ್ವೀಕರಿಸಿ, ಆರು ಮಂದಿ ಮಂಗಳಮುಖಿಯರನ್ನು ಬಂಧನ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ಆರು ಮಂದಿ ಮಂಗಳಮುಖಿಯರ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ 6 ಮಂದಿ ಮಂಗಳಮುಖಿಯರ ವಶಕ್ಕೆ ಪಡೆಯಲಾಗಿದೆ. ಬಂಧಿತ ಮಂಗಳಮುಖಿಯರನ್ನು ವಾಸವಿ ಗೌಡ, ಲಿಪಿಕಾ, ಹಿಮಾ, ಆದ್ಯ, ಮಾಯಾ, ಮೈತ್ರಿ ಅಂತಾ ಗುರುತಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ದುರ್ವರ್ತನೆ ತೋರಿದ ಆರೋಪ ಹಿನ್ನಲೆಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ," ಅಂತಾ ಹೇಳಿದ್ದಾರೆ.
"ಇನ್ನು ಆಸೀಫ್ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಮಂಗಳಮುಖಿಯರ ಮತ್ತೊಂದು ತಂಡ, ನಿನ್ನೆ ದಾಳಿ ಮಾಡಿದವರು ಹೊರ ಜಿಲ್ಲೆಯಿಂದ ಮಂಗಳೂರಿಗೆ ಬಂದು ಇಲ್ಲಿ ಅಕ್ರಮ ಚಟುವಟಿಕೆ ಮಾಡುವವರಾಗಿದ್ದಾರೆ. ಇಲ್ಲಿ ಮಂಗಳಮುಖಿಯರ ಪರಿವರ್ತನಾ ಎಂಬ ಸಂಸ್ಥೆಯಿದ್ದು, ಎಲ್ಲರೂ ಸ್ವಉದ್ಯೋಗ ಮಾಡುತ್ತಾ ಜೀವನ ಮಾಡುತ್ತಿದ್ದಾರೆ. ದಾಳಿ ಮಾಡಿದ ಮಂಗಳಮುಖಿಯರಿಗೂ ತಮಗೂ ಯಾವುದೇ ಸಂಬಂಧ ಇಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಟೋಲ್ ಸಂಗ್ರಹದ ವಿರುದ್ಧ ಆಸೀಫ್ ಪ್ರತಿಭಟನೆಗೆ ಸಾಮಾಜಿಕ ಜಾಲತಾಣ ಭಾರೀ ಬೆಂಬಲ ವ್ಯಕ್ಯವಾಗುತ್ತಿರುವ ಹಿನ್ನಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೊನೆಗೂ ಸ್ಪಷ್ಟನೆ ನೀಡಿದೆ. ಸುರತ್ಕಲ್ ಟೋಲ್ ಗೇಟ್ ಬಳಿ ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕೃತ ಟೋಲ್ ಗೇಟ್ ಅಂತಾ ಬ್ಯಾನರ್ ಅಳವಡಿಸಿದೆ. ಆದರೆ ಆಸೀಫ್ ಈ ಬಗ್ಗೆ ಜಿಲ್ಲಾಧಿಕಾರಿ ತನಿಖೆಗೆ ಸೂಚಿಸುವವರೆಗೂ ಪ್ರತಿಭಟನೆ ಕೈ ಬಿಡಲ್ಲ ಅಂತಾ ನಿರ್ಧಾರ ಪ್ರಕಟಿಸಿದ್ದಾರೆ.












Click it and Unblock the Notifications