New year 2024: ಹೊಸ ವರ್ಷ ಸಂಭ್ರಮಾಚರಣೆಗೆ ಪಣಂಬೂರ್ ಬೀಚ್‌ನತ್ತ ಹರಿದುಬಂದ ಪ್ರವಾಸಿಗರ ದಂಡು
ಮಂಗಳೂರು, ಡಿಸೆಂಬರ್, 31: 2023 ಮುಗಿಸಿ 2024 ಅನ್ನು ಕೆಲವೇ ಕ್ಷಣಗಳಲ್ಲಿ ಸ್ವಾಗತ ಮಾಡಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಹಲವೆಡೆ ಸಂಭ್ರಮಾಚರಣೆಗಳು ಶುರುವಾಗಿವೆ. ಇನ್ನು ಕಡಲ ನಗರಿ ಕುಡ್ಲ ಹೊಸವರ್ಷಾಚರಣೆ ಆಚರಿಸಲು ಸಜ್ಜಾಗುತ್ತಿದ್ದು, ಈ ಹಿನ್ನೆಲೆ ಪಣಂಬೂರು ಬೀಚ್‌ನತ್ತ ಜನಸಾಗರವೇ ಹರಿದು ಬಂದಿದೆ.
ವರ್ಷಾಂತ್ಯದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಪಣಂಬೂರು ಬೀಚ್‌ನಲ್ಲಿ ಸಾವಿರಾರು ಮಂದಿ ಸೇರಿದ್ದಾರೆ. ರಾತ್ರಿ 10 ಗಂಟೆವರೆಗೆ ಬೀಚ್‌ನಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿತ್ತು.

ಇನ್ನು ನೈತಿಕ ಪೊಲೀಸ್ ಗಿರಿ ತಡೆಯಲು ಪೊಲೀಸ್ ಇಲಾಖೆ ಇದೀಗ ಹೊಸ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ಅದಕ್ಕಾಗಿ ಬೀಚ್ ಮುಂಭಾಗ ಕಂಟ್ರೋಲ್ ರೂಂ ಸಹಿತ ಸಹಾಯವಾಣಿ ನಂಬರ್‌ನ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಬೀಚ್ ಸೇರಿದಂತೆ ಜನಸಂದಣಿ ಜಾಸ್ತಿ ಜನ ಸೇರಿರುವ ಪ್ರದೇಶದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದೆ.
ವರ್ಷದ ಕೊನೆಯ ದಿನ ಸೂರ್ಯಾಸ್ತವನ್ನು ಕಾಣುತ್ತಾ ಮಂಗಳೂರು ಪಣಂಬೂರು ಬೀಚ್‌ನಲ್ಲಿ ಜನ ಈಗಾಗಲೇ 2023ಕ್ಕೆ ವಿದಾಯ ಕೋರಿದ್ದಾರೆ. ಮಂಗಳೂರು ನಗರದಲ್ಲಿ ಪ್ರವಾಸಿಗರ ದಂಡೇ ನೆರೆದಿದ್ದು, ಹೊಸವರ್ಷಾಚರಣೆಯ ಮುನ್ನ ಈ ವರ್ಷವನ್ನು ಬೀಳ್ಕೊಡಲು ಪಣಂಬೂರು ಕಡಲ ಕಿನಾರೆಗೆ ಪ್ರವಾಸಿಗರ ಗುಂಪೇ ಹರಿದುಬಂದಿದೆ.
ಕಡಲ ಅಲೆಯಲ್ಲಿ ಆಟ ಆಡುತ್ತಾ ಸೂರ್ಯಾಸ್ತಮಾನ ಆಗಲು ಕಾದು ಕುಳಿತಿದ್ದ ಜನರು, ಸೂರ್ಯ ಅಸ್ತಂಗತನಾಗುವ ಸುಳಿವು ನೀಡುತ್ತಿದ್ದಂತೆಯೇ ಸಂಭ್ರಮದಿಂದ ಕುಣಿದಾಡಿದ್ದಾರೆ. ಈ ವರ್ಷದ ನೋವು-ನಲಿವುಗಳನ್ನೆಲ್ಲಾ ಕಾಲಗರ್ಭದೊಳಗೆ ಸೇರಿಸಿ ಮುಂದಿನ ಹೊಸ ವರ್ಷ ಸಂತಸದ ದಿನಗಳ ಕನಸು ಕಾಣುತ್ತಾ ಕೇಕೆ ಹಾಕಿ ಸಂಭ್ರಮಿಸಿದ್ದಾರೆ.
ವರ್ಷಾಂತ್ಯದ ದಿನವಾದ ಭಾನುವಾರ (ಡಿಸೆಂಬರ್ 31) ಗರಿಷ್ಠ ಪ್ರಮಾಣದಲ್ಲಿ ಪ್ರವಾಸಿಗರು ಪಣಂಬೂರು ಬೀಚ್‌ನತ್ತ ಬಂದಿದ್ದಾರೆ. ಪಣಂಬೂರು ಬೀಚ್‌ನಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಸೇರಿದಂತೆ ಇತರ ಜಲಕ್ರೀಡೆಗಳಲ್ಲಿ ತೊಡಗಿಸಿದ ವರ್ಷದ ಕೊನೆಯ ದಿನವನ್ನು ಸಂಭ್ರಮದಿಂದ ಕಳೆದಿದ್ದಾರೆ. ಕೆಂಪೇರಿದ ಬಾನು, ಸಮುದ್ರದಲ್ಲಿ ಲೀನವಾದ ಸೂರ್ಯ ಎಲ್ಲವೂ ವರ್ಷದ ಕೊನೆಯ ದಿನದ ಕೊನೆಯ ಹಗಲಿಗೆ ಇತಿ ಶ್ರೀ ಹಾಡಿದೆ. ಈ ಮೂಲಕ ಹಳೆಯ ವರ್ಷ ನೆನಪಿನಂಗಳದಲ್ಲಿ ಜಾರಿದ ಬೇಸರದ ಜೊತೆಗೆ ಭರವಸೆಯ ಹೊಸವರ್ಷದ ಸ್ವಾಗತಕ್ಕಾಗಿ ಜನ ಮುಕ್ತ ಮನಸ್ಸಿನಿಂದ ವರ್ಷಾಂತ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಪಣಂಬೂರು ಬೀಚ್‌ನಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಜೊತೆಗೆ ಸಾಕಷ್ಟು ಜಲಕ್ರೀಡೆಗಳು ಬಂದಿದ್ದು, ಪ್ರವಾಸಿಗರು ಪಣಂಬೂರು ಬೀಚ್ ಅಭಿವೃದ್ಧಿ ಕಂಡು ಖುಷಿಯಾಗಿದ್ದಾರೆ. ಬೀಚ್‌ನಲ್ಲಿ ನೆರೆದ ಸಾವಿರಾರು ಜನ ಸೂರ್ಯಾಸ್ತವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ಸಮುದ್ರದಲ್ಲಿ ಲೀನವಾಗಲು ಹೊರಟ ಸೂರ್ಯನಿಗೆ ಕೊನೆಗೆ ಮೋಡ ಅಡ್ಡ ಬಂದಿದ್ದು, ಪೂರ್ಣ ಪ್ರಮಾಣದ ಸೂರ್ಯಾಸ್ತವನ್ನು ಕಾಣಲಾಗದೇ ಪ್ರವಾಸಿಗರು ನಿರಾಶೆಗೊಂಡಿದ್ದಾರೆ. ಆದರೂ ಬೀಚ್‌ನಲ್ಲಿ ತನ್ಮಯರಾಗಿ ಜನ ಹೊರಗಿನ ಜಂಜಾಟವನ್ನು ಮೆರೆತು ಸಮಯ ಕಳೆದಿದ್ದಾರೆ.












Click it and Unblock the Notifications