ಬೀದಿ ನಾಯಿಗಳ ಪೋಷಕಿ ರಜನಿ ಶೆಟ್ಟಿ ಮೇಲೆ ಮಹಿಳೆಯಿಂದ ಹಲ್ಲೆ: ದೂರು ದಾಖಲು
ಮಂಗಳೂರು, ಜುಲೈ 03: ಮಂಗಳೂರಿನ ಶ್ವಾನ ಪ್ರೇಮಿ ರಜನಿ ಶೆಟ್ಟಿ ಅವರ ಮೇಲೆ ಪಕ್ಕದ ಮನೆಯ ಮಹಿಳೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ನಡೆದಿದೆ. ಮಂಜುಳಾ ಶೆಟ್ಟಿ ಹಲ್ಲೆ ಮಾಡಿದ ಮಹಿಳೆ ಎನ್ನುವ ಆರೋಪ ಕೇಳಿಬಂದಿದೆ.
ಮಂಗಳೂರು ನಗರದ ಬಳ್ಳಾಲ್ ಭಾಗ್ ನಿವಾಸಿಯಾಗಿರುವ ರಜನಿ ಶೆಟ್ಟಿಯವರ ಮನೆಯ ಹಿಂಬದಿಯಲ್ಲಿ ಮಂಜುಳಾ ಶೆಟ್ಟಿಯವರ ಮನೆಯಿದ್ದು ಹಲವು ಸಮಯದಿಂದ ರಜನಿ ಶೆಟ್ಟಿ ಅವರ ಜೊತೆ ತಗಾದೆ ತೆಗೆಯುತ್ತಿದ್ದರು. ರಜನಿಶೆಟ್ಟಿ ಅವರ ಮನೆಯಲ್ಲೇ ಹತ್ತಾರು ಬೀದಿ ನಾಯಿಗಳಿದ್ದು, ಈ ನಾಯಿಗಳನ್ನು ರಜನಿ ಶೆಟ್ಟಿಯವರು ಸಾಕೋದು ಮಂಜುಳಾ ಅವರಿಗೆ ಇಷ್ಟ ಇರಲಿಲ್ಲ. ಈ ಹಿನ್ನಲೆಯಲ್ಲಿ ಇಂದು ಕೂಡ ರಜನಿ ಶೆಟ್ಟಿಯವರ ಜೊತೆ ಮಂಜುಳಾ ಕಿರಿ ಕಿರಿ ಮಾಡಿದ್ದಾರೆ ಎನ್ನಲಾಗಿದೆ.

ರಜನಿಯವರು ನಾಯಿಗಳ ಸೇವೆಗಾಗಿ ಕಾರ್ಪೊರೇಷನ್ ನೀರು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಂಜುಳಾ ರಜನಿ ಶೆಟ್ಟಿಯವರ ಹಲ್ಲೆ ಮಾಡಿದ್ದಾರೆ. ರಜನಿ ಬಟ್ಟೆ ತೊಳೆಯುವಲ್ಲಿ ಬಂದು ಬಕೆಟ್‌ಅನ್ನು ಎತ್ತಿ ಬಿಸಾಡಿದ್ದಾರೆ. ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲೇ ಇದ್ದ ಕಲ್ಲಿನಿಂದ ರಜನಿ ಶೆಟ್ಟಿವರತ್ತ ಎಸೆದಿದ್ದು, ಕಲ್ಲೇಟಿನಿಂದ ರಜನಿಯವರ ಕೈಗೆ ಗಾಯವಾಗಿದೆ.
ಈ ಹಿಂದೆಯೂ ಮಂಜುಳಾ, ಮನೆಯ ಕಸವನ್ನು ರಜನಿ ಮನೆಯ ಮೇಲೆ ಸುರಿಯುವುದು, ನಾಯಿ ಬೆಕ್ಕಿಗೆ ಕೋಲಿನಿಂದ ಥಳಿಸುವುದು, ರಜನಿ ಮನೆಗೆ ಅತಿಥಿಗಳು, ಪ್ರಾಣಿ ಪ್ರಿಯರು ಆಗಮಿಸಿದಾಗ ಅವ್ಯಾಚ ಶಬ್ದಗಳಿಂದ ನಿಂದಿಸುವುದು, ಮನೆಯ ಬಳಿಯ ಕಾರ್ಪೋರೇಷನ್ ನೀರಿನ ಪೈಪ್ ಉಪಯೋಗಿಸಲು ಬಿಡದಿರುವುದು ಸೇರಿದಂತೆ ಹಲವು ರೀತಿಯಲ್ಲಿ ತೊಂದರೆಯನ್ನು ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಜನಿ ಶೆಟ್ಟಿ, ಪ್ರತಿ ದಿನ ಮಂಜುಳಾ ಶೆಟ್ಟಿ ಕಿರಿಕಿರಿ ಮಾಡುತ್ತಿದ್ದರು. ನಮ್ಮ ಮನೆಯ ನಾಯಿ ಪ್ರಾಣಿಗಳು ಅವರಿಗೆ ಏನೂ ತೊಂದರೆ ಮಾಡಿಲ್ಲ. ಆದರೂ ಪ್ರತಿ ದಿನ ತೊಂದರೆ ಕೊಡುತ್ತಿದ್ದಾರೆ. ಸಾಕಷ್ಟು ದಿನ ಸಹಿಸಿಕೊಂಡು ಬಂದೆ. ಇವತ್ತೂ ಗಲಾಟೆಗೆ ಬಂದು ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ನಮ್ಮ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬರ್ಕೆ ಠಾಣೆಯಲ್ಲಿ ಮಂಜುಳಾ ಶೆಟ್ಟಿ ವಿರುದ್ಧ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. ಶ್ವಾನ ಪ್ರೇಮಿ ರಜನಿ ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಂಜುಳಾ ಶೆಟ್ಟಿ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications