ಬೆಳ್ತಂಗಡಿ: ಹೃದಯಾಘಾತದಿಂದ 24 ವರ್ಷದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿ ನಿಧನ
ಮಂಗಳೂರು, ಮೇ 31: ಹೃದಯಾಘಾತದಿಂದ 24 ವರ್ಷದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಪಡಂಗಡಿ ಪೊಯ್ಯೆಗುಡ್ಡೆಯ ನಿವಾಸಿಯಾಗಿದ್ದ ಸಾಲಿಯತ್(24) ಮೃತ ದುರ್ದೈವಿ.
ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ಸಾಲಿಯತ್ ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರಿನಲ್ಲಿರುವ ಪತಿಯ ಮನೆಯಲ್ಲಿ ವಾಸವಾಗಿದ್ದರು. ಮಂಗಳವಾರ ಸಾಲಿಯತ್‌ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಾವನ್ನಪ್ಪಿದ್ದಾರೆ. ಸಾಲಿಯತ್ ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ವೈದ್ಯರು ಖಚಿತ ಪಡಿಸಿದ್ದಾರೆ.

ಪಡಂಗಡಿ ಪ್ರಾಥಮಿಕ ಶಾಲೆಯಲ್ಲಿ 9ನೇ ತರಗತಿ ಹಾಗೂ ಮುಂಡಾಜೆ ಅನುದಾನಿತ ಪ್ರೌಢಶಾಲೆಯಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿದ ಸಾಲಿಯತ್, ಉಜಿರೆ ಎಸ್‌ಡಿಎಂನಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಪಡೆದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಅತೀವ ಆಸಕ್ತಿ ಹೊಂದಿದ್ದ ಅವರು ಮೆಂಟರ್ ಹೈದರ್ ಪಡಂಗಡಿ ಅವರ ಮಾರ್ಗದರ್ಶನದಲ್ಲಿ ವಾಲಿಬಾಲ್‌ನಲ್ಲಿ ಹೆಸರು ಗಳಿಸಿದ್ದರು.
ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಎರಡನೇ ಸ್ಥಾನ ಪಡೆಯುವಲ್ಲಿ ಸಾಲಿಯತ್ ಮಹತ್ವದ ಪಾತ್ರ ವಹಿಸಿದ್ದರು.
ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ ಸಾಲಿಯತ್, ಕರ್ನಾಟಕ ರಾಜ್ಯವನ್ನು ಈ ಸಮಯದಲ್ಲಿ ಪ್ರತಿನಿಧಿಸುವ ಮೂಲಕ ಅತ್ಯುತ್ತಮ ವಾಲಿಬಾಲ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಉಜಿರೆ ಎಸ್‌ಡಿಎಂನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದರು.
ಸಾಲಿಯತ್ ರಾಷ್ಟ್ರೀಯ ವಾಲಿಬಾಲ್‌ನಲ್ಲಿ ಬೆಳ್ಳಿ ಪದಕ, ಹಿರಿಯ ರಾಷ್ಟ್ರೀಯ ದಕ್ಷಿಣ ವಲಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಜೂನಿಯರ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದರು. ಈಕೆಯ ಅಪೂರ್ವ ಸಾಧನೆಗೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂತಹ ಕ್ರೀಡಾಪಟುವಿನ ಅಕಾಲಿಕ ನಿಧನಕ್ಕೆ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಸಂತಾಪ ಸೂಚಿಸಿದೆ.












Click it and Unblock the Notifications