ತೀರ್ಥಯಾತ್ರೆ ಮಾಡಿದ್ರೆ ಪುಣ್ಯ ಸಿಗುತ್ತಿತ್ತು: ರಮಾನಾಥ ರೈಗೆ ನಳಿನ್ ಟಾಂಗ್
ಮಂಗಳೂರು, ಡಿಸೆಂಬರ್ 13: ಸಚಿವ ರಮಾನಾಥ ರೈ 'ಸಾಮರಸ್ಯ ನಡಿಗೆ' ಪಾದಯಾತ್ರೆ ಬದಲು ತೀರ್ಥಯಾತ್ರೆ ಮಾಡಿದ್ದರೆ ಪುಣ್ಯವಾದರೂ ಸಿಗುತ್ತಿತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೇರಳದಲ್ಲಿ ಹತ್ಯಾಕಾಂಡ ನಡೆಸುತ್ತಿರುವ ಸಿಪಿಐಎಂ ಜತೆ ಸೇರಿ ಸಾಮರಸ್ಯ ಸಾರುತ್ತಿರುವುದು ವಿಪರ್ಯಾಸ ಎಂದು ಅವರು ಕಿಡಿಕಾರಿದರು.
ಸಚಿವ ರೈ ಅಸಮರ್ಥ ಆಡಳಿತವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ತೊಡಕಾಗಿದೆ ಎಂದು ಆರೋಪಿಸಿದ ಅವರು, "ಕೇವಲ ಬಂಟ್ವಾಳ ಕ್ಷೇತ್ರದಲ್ಲಿ ಮಾತ್ರ ಪಾದಯಾತ್ರೆ ನಡೆಸಲು ಸಚಿವರು ಬಂಟ್ವಾಳ ತಾಲೂಕಿನ ಉಸ್ತುವಾರಿ ಸಚಿವರಲ್ಲ; ಇಡೀ ಜಿಲ್ಲೆಯ ಉಸ್ತುವಾರಿ ಸಚಿವರು," ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಕ್ಷೇತ್ರದಲ್ಲಿ ಮಾತ್ರ ಪಾದಯಾತ್ರೆ ಮಾಡುವ ಮೂಲಕ ಸಚಿವ ರಮಾನಾಥ್ ರೈ ಓಟಿನ ಬೇಟೆಯ ನಾಟಕ ಆರಂಭಿಸಿದ್ದಾರೆ ಎಂದು ಅವರು ದೂರಿದರು.
ರಾಜ್ಯದಲ್ಲಿ ದುರಾಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಪಾಲಿಗೆ ಹಾರ್ಲಿಕ್ಸ್ ಇದ್ದಂತೆ ಎಂದ ಅವರು ಈ ಸಂದರ್ಭದಲ್ಲಿ ವ್ಯಂಗ್ಯವಾಡಿದರು.
ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತ ಪ್ರಕರಣ ಪ್ರಸ್ತಾಪಿಸಿದ ನಳಿನ್ ಕುಮಾರ್ ಕಟೀಲ್, ಪರೇಶ್ ಮೇಸ್ತ ಪ್ರಕರಣವನ್ನು 'ಎನ್.ಐ.ಎ' ತನಿಖೆಗೆ ವಹಿಸುವಂತೆ ಒತ್ತಾಯಿಸಿದರು. ಡಿಸೆಂಬರ್ 18 ರಂದು ಹೊನ್ನಾವರ ದಲ್ಲಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.












Click it and Unblock the Notifications