ಮೂಡುಬಿದಿರೆಗೆ ಸಿಸಿಟಿವಿ ಕಣ್ಗಾವಲಿನ ಅಗತ್ಯವಿದೆ
ಮೂಡುಬಿದಿರೆ, ಅಕ್ಟೋಬರ್ 29 : ಪ್ರವಾಸೋದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವ ಮೂಡುಬಿದಿರೆಗೆ ಸಿಸಿಟಿವಿ ಕಣ್ಗಾವಲಿನ ಅವಶ್ಯಕತೆ ಇದೆ. ಕಳೆದ ಎರಡು ವರ್ಷದಿಂದ ಮೂಡುಬಿದಿರೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುರಸಭೆ ಮತ್ತು ಪೊಲೀಸರು ಕ್ಯಾಮರಾ ಅಳವಡಿಸಲು ಮುಂದಾಗಬೇಕಿದೆ.
ಎರಡು ವರ್ಷದ ಹಿಂದೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ ಕೋಟ್ಯಾಂರ ರೂಪಾಯಿ ಮೌಲ್ಯದ ವಿಗ್ರಹಗಳ ಕಳ್ಳತನ, ಕೆಲವು ದಿನಗಳ ಹಿಂದೆ ನಡೆದ ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣಗಳ ನಂತರ ಜನರು ಆತಂಕಗೊಂಡಿದ್ದಾರೆ. [ಜೈನ ಬಸದಿಯಲ್ಲಿ ಮತ್ತೆ ಕಳ್ಳತನ]

ಈ ಹಿನ್ನಲೆಯಲ್ಲಿ ಮೂಡುಬಿದಿರೆಯಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಸಿಸಿ ಕ್ಯಾಮರಾ ಆಳವಡಿಕೆ ಮಾಡಬೇಕು ಎಂಬುದು ಜನರ ಒತ್ತಾಯವಾಗಿದೆ. ಮೂಡುಬಿದಿರೆಯ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರು ನಗರದಲ್ಲಿ ಸಿಸಿ ಕ್ಯಾಮರಾ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. [ಮೂಡುಬಿದಿರೆ : ಕದ್ದ ವಿಗ್ರಹಗಳು ವಾಪಸ್]
ಸಿಸಿಟಿವಿ ಅಳವಡಿಕೆ ಮಾತ್ರವಲ್ಲ ಗುಣಮಟ್ಟವನ್ನು ನಿರ್ವಹಣೆ ಮಾಡಬೇಕು ಎಂಬುದು ಜನರ ಒತ್ತಾಯವಾಗಿದೆ. ಉತ್ತಮ ಗುಣಮಟ್ಟದ ಕ್ಯಾಮರಾಗಳು ದುಬಾರಿ ಆಗುವುದರಿಂದ ಚಿಕ್ಕ-ಪುಟ್ಟ ವ್ಯಾಪಾರಿಗಳು ಕ್ಯಾಮರಾ ಅಳವಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಕ್ಯಾಮರಾವಿದ್ದರೂ ಅದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. [ಮೂಡಬಿದಿರೆ : ಪ್ರಶಾಂತ್ ಪೂಜಾರಿ ಹತ್ಯೆ]
ಎಲ್ಲೆಲ್ಲಿ ಸಿಸಿ ಕ್ಯಾಮರಾದ ಅಗತ್ಯವಿದೆ : ಮೂಡುಬಿದಿರೆ ಕೆನರಾ ಬಸ್ ಸಂಘದವರು ಖಾಸಗಿ ಬಸ್ ನಿಲ್ದಾಣದಲ್ಲಿ ಕ್ಯಾಮರಾ ಅಳವಡಿಸಿದ್ದಾರೆ. ಕಾರ್ಕಳಕ್ಕೆ ತೆರಳುವ ಬಸ್ಸುಗಳು ನಿಲುಗಡೆಗೊಳ್ಳುವ ಸ್ಥಳದಲ್ಲಿ ಕ್ಯಾಮರಾ ಆವಳಡಿಕೆ ಅಗತ್ಯವಿದೆ.
ಪುರಸಭೆಯ ಅಧೀನದಲ್ಲಿರುವ ರಾಜೀವ್ ಗಾಂಧಿ ಕಾಂಪ್ಲೆಕ್ಸ್‌ನಲ್ಲಿ ಕನಿಷ್ಟ 2 ಕ್ಯಾಮರಾಗಳು ಬೇಕು. ಮಾರುಕಟ್ಟೆ ಮುಂಭಾಗ, ನಾರಾವಿ ಹಾಗೂ ಬಂಟ್ವಾಳ, ಬೆಳ್ತಾಂಗಡಿ ರಸ್ತೆಗಳು, ಹಳೇ ಪೊಲೀಸ್ ಠಾಣೆ ಬಳಿಯೂ ಸಿಸಿ ಕ್ಯಾಮರಾ ಅಳವಡಿಸುವ ಅವಶ್ಯಕತೆಯಿದೆ ಎನ್ನುತ್ತಾರೆ ಸ್ಥಳೀಯರು.
ಜೈನಪೇಟೆ, ಪೇಟೆಯಲ್ಲಿ ಮುಖ್ಯರಸ್ತೆಯಿಂದ ವಿವಿಧ ಕಡೆಗಳಿಗೆ ಕವಲೊಡೆಯುವ ಸ್ಥಳಗಳಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸುವುದು ಅಗತ್ಯವಾಗಿದೆ. ಇಂದಿರಾಗಾಂಧಿ ವಾಣಿಜ್ಯ ಸಮುಚ್ಛಯದಲ್ಲಿ ಪುರಸಭೆ ಸಿಸಿ ಕ್ಯಾಮರಾ ಅಳವಡಿಸಿದ್ದು , ಇದನ್ನು ಸರಿಯಾಗಿ ನಿರ್ವಹಣೆ ಮಾಡುವ ಅಗತ್ಯವಿದೆ.
ಅಂದಹಾಗೆ ಮೂಡಬಿದಿರೆಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಮತ್ತು ಭಜರಂಗದಳದ ಕಾರ್ಯಕರ್ತನಾಗಿದ್ದ ಪ್ರಶಾಂತ್ ಪೂಜಾರಿಯನ್ನು ಅಕ್ಟೋಬರ್ 9ರಂದು ಬೆಳಗ್ಗೆ ಸಮಾಜಮಂದಿರ ಗೇಟ್ ಬಳಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ.












Click it and Unblock the Notifications