ಬಿಜೆಪಿಯವರಿಗೆ ಅನುಭವ ಕೊರತೆ ಇಷ್ಟಿದೆ ಎಂಬುದು ಗೊತ್ತಿರಲಿಲ್ಲ: ಖಾದರ್
ಮಂಗಳೂರು, ಅಕ್ಟೋಬರ್ 8: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ 15 ಕೋಟಿ ರುಪಾಯಿ ಅನುದಾನವನ್ನು ಕಸಾಯಿಖಾನೆಗೆ ನೀಡುವ ಹೇಳಿಕೆ ನೀಡಿ, ವಿವಾದ ಸೃಷ್ಟಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುದ್ರೋಳಿಯಲ್ಲಿ ಇರುವ ಕಸಾಯಿಖಾನೆ ಬಹಳ ಹಳೆಯದಾಗಿದೆ. ಅದರ ಅಭಿವೃದ್ಧಿಗೆ ಜನರು ಬೇಡಿಕೆ ಇಟ್ಟಿದ್ದರು. ಈ ವಿಚಾರ ಬಿಜೆಪಿಯವರಿಗೂ ಗೊತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಸಮಗ್ರ ಅಭಿವೃದ್ಧಿ ಅಡಕವಾಗಿದೆ. ಅದಕ್ಕಾಗಿಯೇ ಹಣ ಬರುತ್ತದೆ. ಅದರಲ್ಲಿ ಸ್ವಚ್ಛತೆಯೂ ಒಂದು ಭಾಗ ಎಂದು ಹೇಳಿದರು.
ನಗರದ ಘನ ತಾಜ್ಯ ನಿಯಂತ್ರಣಕ್ಕೆ ಬರಬೇಕಾದರೆ ಕಸಾಯಿಖಾನೆ ಅಭಿವೃದ್ಧಿ ಆಗಬೇಕಿದೆ. ಬಿಜೆಪಿಯವರು ಈ ವಿಚಾರದಲ್ಲಿ ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರಕ್ಕೆ ಪತ್ರ ಬರೆದು, ಅನುದಾನ ನಿಲ್ಲಿಸಲಿ ಎಂದು ಯು.ಟಿ. ಖಾದರ್ ಸವಾಲು ಹಾಕಿದರು.
ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯವರೇ ಕಸಾಯಿಖಾನೆಯಲ್ಲಿ ಮೂಲಸೌಕರ್ಯ ಇಲ್ಲ ಎಂದು ಹೇಳಿದ್ದರು. ಒಂದು ವರ್ಷ ಕಸಾಯಿಖಾನೆಯ ಟೆಂಡರ್ ಬಿಜೆಪಿಯವರೇ ಪಡೆದಿದ್ದರು. ಆಗ ಎಲ್ಲವೂ ಸರಿ ಇತ್ತು. ಆದರೆ ಈಗ ಸರಿ ಇಲ್ಲ ಎನ್ನುವುದು ಬಿಜೆಪಿಯವರ ಇಬ್ಬಗೆ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘನತ್ಯಾಜ್ಯದ ವಿಲೇವಾರಿಗೆ ವ್ಯವಸ್ಥೆ ಇರಲಿಲ್ಲ
ಮಂಗಳೂರಿನ ಸ್ವಚ್ಛತೆ ದೃಷ್ಟಿಯಿಂದ ಕಸಾಯಿಖಾನೆಗೆ 15 ಕೋಟಿ ರುಪಾಯಿ ನೀಡಲಾಗಿದೆ. ಕಸಾಯಿಖಾನೆಯಲ್ಲಿ ವೈದ್ಯರಿಗೆ ಕೂರುವ ವ್ಯವಸ್ಥೆ ಇಲ್ಲ. ಘನತ್ಯಾಜ್ಯದ ವಿಲೇವಾರಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಅದರ ಸಮಗ್ರ ಅಭಿವೃದ್ಧಿ ಹಾಗೂ ಸುಸಜ್ಜಿತ ಕಸಾಯಿಖಾನೆ ನಿರ್ಮಾಣಕ್ಕೆ 15 ಕೋಟಿ ರುಪಾಯಿ ನೀಡಲು ಪ್ರಸ್ತಾವ ಕಳುಹಿಸಲಾಗಿದೆ ಎಂದರು.

ಬಿಜೆಪಿಯವರಿಗೆ ಆಡಳಿತ ಅನುಭವ ಇಷ್ಟು ಕಡಿಮೆ ಎಂದು ಗೊತ್ತಿರಲಿಲ್ಲ
ಕಸಾಯಿಖಾನೆ ಆಭಿವೃದ್ಧಿ ಬಗ್ಗೆ ನಾನು ಕೊಟ್ಟಿದ್ದು ಸಲಹೆ ಮಾತ್ರ. ಅಧಿಕಾರಿಗಳು ಈ ಕುರಿತು ಯೋಜನೆ ತಯಾರಿಸಿ, ಕೇಂದ್ರಕ್ಕೆ ಕಳುಹಿಸಿದ್ದಾರೆ. ಬಿಜೆಪಿಯವರಿಗೆ ಆಡಳಿತದ ಅನುಭವ ಕಡಿಮೆ ಅಂದುಕೊಂಡಿದ್ದೆ. ಆದರೆ ಇಷ್ಟು ಕಡಿಮೆ ಎಂದು ಗೊತ್ತಿರಲಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಬಿಜೆಪಿಯವರು ಆಗ ಏಕೆ ಚಕಾರ ಎತ್ತಲಿಲ್ಲ?
ಸ್ಮಾರ್ಟ್ ಸಿಟಿಯಲ್ಲಿ 15 ಕೋಟಿ ರುಪಾಯಿ ಕಸಾಯಿಖಾನೆಗೆ ನೀಡಿದ ವಿಚಾರ ಬೋರ್ಡ್ ಮೀಟಿಂಗ್ ನಲ್ಲಿ ತೀರ್ಮಾನಿಸಿ, ನಿರ್ಧಾರ ಮಾಡಲಾಗಿದೆ. ಬೋರ್ಡ್ ಮೀಟಿಂಗ್ ನಲ್ಲಿ ಬಿಜೆಪಿಯವರೂ ಇದ್ದರು. ಆದರೆ ಸಭೆಯ್ಲಲಿ ಯಾಕೆ ಚಕಾರ ಎತ್ತಿಲ್ಲ? ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಪ್ರಶ್ನಿಸಿದರು.

ಕಸಾಯಿಖಾನೆಗೆ ಹಣ ನೀಡಬೇಡಿ ಎಂದು ಕೇಂದ್ರಕ್ಕೆ ಮನವಿ ಮಾಡಲಿ
ಸ್ಮಾರ್ಟ್ ಸಿಟಿ ಯೋಜನೆಯ ರೂಪು- ರೇಷೆ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಸ್ಚಚ್ಛ ಭಾರತ ಎಂದು ಬಾಯಲ್ಲಿ ಹೇಳಿದರೆ ಮಾತ್ರ ಸಾಲದು. ಪ್ರತಿ ಮನೆ, ಪರಿಸರ ಸ್ವಚ್ಛವಾಗಬೇಕು. ನಗರ, ಪಟ್ಟಣ, ಗ್ರಾಮಗಳು ಸ್ವಚ್ಛವಾದರೆ ಮಾತ್ರ ದೇಶ ಸ್ವಚ್ಛವಾಗಲಿದೆ. ಬಿಜೆಪಿಯವರು ಬೇಕಿದ್ದರೆ ಕಸಾಯಿಖಾನೆಯ ಅಭಿವೃದ್ಧಿಗೆ ಯೋಜನೆಯಿಂದ ಬರುವ ಹಣ ನೀಡುವುದು ಬೇಡ ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಲಿ ಎಂದು ಅವರು ಸವಾಲೆಸೆದರು.












Click it and Unblock the Notifications