ನಳಿನ್ ಕುಮಾರ್ ಕಟೀಲ್‌ಗೆ ಚುನಾವಣೆಯಲ್ಲಿ ಏನು ಮಾಡಬೇಕೋ ನಾನು ಮಾಡುತ್ತೇನೆ - ಮಧು ಬಂಗಾರಪ್ಪ
ಮಂಗಳೂರು, ಜನವರಿ 13: ದಕ್ಷಿಣ ಕನ್ನಡ ಜಿಲ್ಲೆಯ ಸಂಸತ್ ಸ್ಥಾನಕ್ಕೆ ಈ ಬಾರಿ ನಳಿನ್ ಕುಮಾರ್ ಕಟೀಲ್ ಅವರಿಗೆ ಸೀಟು ಕೊಡಬೇಕು. ನಾನು ಚುನಾವಣೆಗೆ ನಿಲ್ಲುವುದಕ್ಕೆ ಹೋಗೋಲ್ಲ. ಆದರೆ ನಾನೇ ಬರುತ್ತೇನೆ. ಅವರಿಗೆ ಚುನಾವಣೆಯಲ್ಲಿ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಕೊಡುವುದಿಲ್ಲ ಅಂದಿದ್ದರು. ಆದರೆ ನಾವು ಗ್ಯಾರಂಟಿಯನ್ನು ಕೊಟ್ಟಿದ್ದೇವೆ. ಟೀಕೆ ಮಾಡಿದವರ ಹಣೆಬರಹಕ್ಕೆ ಒಂದು ಇಂಥಹ ಒಂದು ಕಾರ್ಯಕ್ರಮ ಕೊಟ್ಟಿಲ್ಲ. ಬಿಜೆಪಿಯವರು ಸ್ವಾಮಿ ವಿವೇಕಾನಂದರನ್ನು ಅಡ ತೆಗೆದುಕೊಂಡಂತೆ ಮಾಡುತ್ತಿದ್ದಾರೆ. ಅವರು ಯುವಕರ ಆಶಾಕಿರಣ. ಬಿಜೆಪಿಯವರು ಸ್ವಾಮಿ ವಿವೇಕಾನಂದರು ದುರ್ಬಳಕೆ ಮಾಡಿದ್ದಕ್ಕೆ ಅವರಿಗೆ ಈಗ ಶಿಕ್ಷೆಯಾಗಿದೆ ಎಂದರು.

ನಳಿನ್ ಕುಮಾರ್ ಕಟೀಲ್ ಚರಂಡಿ-ಕಾಲುವೆ ನೋಡಬೇಡಿ, ಹೊಡಿಬಡಿ ಅಂದಿದ್ದರು. ನಾವು ಯುವಕರಿಗಾಗಿ ಯುವನಿಧಿ ಯೋಜನೆ ನೀಡಿದ್ದೇವೆ. ಯುವಕರಿಗೆ ಸಿದ್ದರಾಮಯ್ಯನವರು ಉತ್ತಮ ಕಾರ್ಯಕ್ರಮ ಕೊಟ್ಟಿದ್ದಾರೆ. ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರಸರಕಾರ ಹಿಂದೆ ಬಿದ್ದಿದೆ. ದೇಶದಲ್ಲಿ ನಿರುದ್ಯೋಗ ಹತ್ತು ಪರ್ಸೆಂಟ್ ಆಗಿದೆ, ಇದು ಬಿಜೆಪಿ ಸಾಧನೆ. ಜನ ಬಡತನದಲ್ಲಿ ಓದಿರುತ್ತಾರೆ. ಎಷ್ಟೋ ಮಂದಿ ಡಿಗ್ರಿ ಮಾಡಿದವರು ಕೂಲಿ ಮಾಡುತ್ತಿದ್ದಾರೆ. ಇಂಥವರಿಗೆ ಕೈಹಿಡಿಯಬೇಕೆಂದು ಮೂರು ವರ್ಷ ಭತ್ಯೆ ಕೊಡುತ್ತಿದ್ದೇವೆ ಎಂದರು.
ಗ್ಯಾರಂಟಿ ಯೋಜನೆಯನ್ನು ಬಿಜೆಪಿ ಬೋಗಸ್ ಕ್ರೆಡಿಟ್ ಕಾರ್ಡ್ ಅಂದಿದ್ದರು. ನಳಿನ್ ಕುಮಾರ್ ಕಟೀಲ್ ಯಾವುದೋ ಕಾರಣಕ್ಕೆ ನನ್ನ ರಾಜಿನಾಮೆ ಕೇಳಿದ್ದರು. ಮಾನ ಮರ್ಯಾದೆ ಇದ್ದರೆ ಅವರೇ ರಾಜಿನಾಮೆ ಕೊಡಬೇಕಿತ್ತು. ಬಿಜೆಪಿಗೆ ಸೋಲಿಗೆ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ. 2004ರಲ್ಲಿ ಬಂಗಾರಪ್ಪ ನೀಡಿರುವ ಭಿಕ್ಷೆಯಲ್ಲಿ ಬಿಜೆಪಿ ಅಧಿಕಾರ ನೋಡಿದವರು. ಪ್ರವೀಣ್ ನೆಟ್ಟಾರು ಸಾವಿನ ಸಂದರ್ಭ ನಳಿನ್ ಕುಮಾರ್ ಕಟೀಲ್ ವಿರುದ್ಧ ಘೋಷಣೆ ಕೂಗಿದವರು, ಅವರ ಕಾರು ಪಂಕ್ಚರ್ ಮಾಡಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ ಬಿಜೆಪಿ, ಹಿಂದೂ ಸಂಘಟನೆಗಳು ಕಾರ್ಯಕರ್ತರು. ಅವರಿಗೆ ಹೇಸಿಗೆ ಆಗಬೇಕು ಎಂದು ಮಧು ಬಂಗಾರಪ್ಪ ಹೇಳಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಯಾರ್ಯಾರು..?
ಇನ್ನು ಬಿಜೆಪಿಯಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಂತಿಮಗೊಂಡಂತೆ ಕಾಣುತ್ತಿಲ್ಲ. ಈ ಹಿಂದೆ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ಮುಂದಿನ ಲೋಕಸಭಾ ಅಭ್ಯರ್ಥಿ ಎಂದಿದ್ದರು. ಮುಂದಿನ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದಿದ್ದರು. ಆದರೆ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿಯವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದ ನಾಗರಾಜ ಶೆಟ್ಟಿಯವರು, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಅವರಿಗೆ ಲೋಕಸಭಾ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಇತ್ತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಪಕ್ಷಾಂತರವಾಗಿ ಸ್ಪರ್ಧಿಸಿ ಹೆಚ್ಚು ಮತ ಗಳಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಲೋಕಸಭಾ ಟಿಕೆಟ್ ನೀಡಬೇಕು ಎನ್ನುವ ಆಗ್ರಹ ಕೂಡ ಜೋರಾಗಿದೆ.












Click it and Unblock the Notifications