ಕ್ಲಾಸ್ ಆರಂಭ; ಅಧಿಕಾರಿಗಳಿಗೆ ಫೋಟೋ ಕಳಿಸಿದ ವಿದ್ಯಾರ್ಥಿಗಳು!
ಮಂಗಳೂರು, ಏಪ್ರಿಲ್ 22; ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಜನ ಸೇರುವ ಎಲ್ಲಾ ಕಾರ್ಯಕ್ರಮಗಳನ್ನು, ಶಾಪಿಂಗ್ ಮಾಲ್, ಶಾಲಾ-ಕಾಲೇಜುಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ.
ಮಂಗಳೂರು ನಗರದಲ್ಲಿ ಮಾತ್ರ ಕಾಲೇಜುಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಡೆಸಲಾಗುತ್ತಿತ್ತು. ದೇರಳಕಟ್ಟೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಮತ್ತು ಮುಕ್ಕ ಶ್ರೀನಿವಾಸ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ.
ಕ್ಲಾಸ್‌ಗೆ ಬರುವಂತೆ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಕರೆ ಮಾಡಿ ತಿಳಿಸಿದ್ದು ಒಂದೇ ಕೊಠಡಿಯಲ್ಲಿ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಪಾಠ ಮಾಡಲಾಗುತ್ತಿದೆ.

ಮೆಡಿಕಲ್ ವಿಭಾಗದ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಎಂಬಿಬಿಎಸ್, ಬಿಪಿಟಿ, ಬಿಎಸ್ಸಿ ನರ್ಸಿಂಗ್, ಮತ್ತು ಎಂಎಲ್ಟಿ ಕ್ಲಾಸ್ ಗಳು ನಡೆಯುತ್ತಿದೆ. ಈ ಕಾಲೇಜಿನಲ್ಲಿ ಕೇರಳ- ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳೇ ಅಧಿಕವಾಗಿದ್ದು, ಭಯದಿಂದಲೇ ಕ್ಲಾಸ್ ಕೇಳುವಂತಾಗದೆ.
ಕ್ಲಾಸ್ ನಡೆಯುತ್ತಿರುವ ಬಗ್ಗೆ ವಿದ್ಯಾರ್ಥಿಗಳೇ ಕ್ಲಾಸ್ ರೂಂ ಫೋಟೋ ತೆಗೆದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿದ್ದಾರೆ.ಸರ್ಕಾರದ ನಿಯಮ ಉಲ್ಲಂಘನೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಈ ಬಗ್ಗೆ ಪಕ್ರಟಣೆ ಹೊರಡಿಸಿರುವ ಅಧಿಕಾರಿಗಳು ಕಾಲೇಜುಗಳು ಸರ್ಕಾರದ ನಿಯಮಗಳನ್ನು ಕಡ್ಡಾಯ ವಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳನ್ನು ಕಾಲೇಜಿಗೆ ಬರುವಂತೆ ಒತ್ತಾಯ ಮಾಡಬಾರದು. ಶಿಕ್ಷಕರು ಮಾತ್ರ ಕಾಲೇಜಿಗೆ ಬಂದು ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇ 4 ರವರೆಗೆ ಕಾಲೇಜುಗಳಲ್ಲಿ ತರಗತಿಗಳು ನಡೆಯಬಾರದು. ತರಗತಿ ನಡೆಸಿದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.












Click it and Unblock the Notifications