Breaking: ಮಂಗಳೂರು ಪಾಲಿಕೆ: ಬಿಜೆಪಿಯ ಜಯಾನಂದ ಅಂಚನ್ ಮೇಯರ್, ಪೂರ್ಣಿಮಾ ಉಪಮೇಯರ್
ಮಂಗಳೂರು ಸೆಪ್ಟೆಂಬರ್ 09: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂದು ಮೇಯರ್ ಚುನಾವಣೆ ನಡೆಯಿತು. ಮಂಗಳೂರು ನೂತನ ಮೇಯರ್ ಆಗಿ ಬಿಜೆಪಿಯ ಜಯಾನಂದ ಅಂಚನ್ ಆಯ್ಕೆಯಾಗಿದ್ದು, ಪೂರ್ಣಿಮಾ ಉಪಮೇಯರ್ ಆಗಿದ್ದಾರೆ.
ಮಂಗಳೂರು ಪಾಲಿಕೆಯ 23ನೇ ಅವಧಿಯ ಮೇಯರ್ - ಉಪ ಮೆಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ (ಸೆಪ್ಟೆಂಬರ್ 9) ಇಂದು ನಡೆಯಿತು. ಬಿಜೆಪಿಯ ಅಭ್ಯರ್ಥಿ ಜಯಾನಂದ ಅಂಚನ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ಸಂದರ್ಭದಲ್ಲಿ ರಾಜಕೀಯ ಅನುಭವ, ಮಹಾನಗರ ಪಾಲಿಕೆಯ ಮೇಲೆ ಪೂರ್ಣ ಹಿಡಿತ, ಚುನಾವಣೆ ಸಂದರ್ಭದಲ್ಲಿ ತನು ಮನ ಧನದೊಂದಿಗೆ ಓಡಾಟ ನಡೆಸುವ ಅಭ್ಯರ್ಥಿಯನ್ನು ಮೇಯರ್ ಮಾಡುವ ಬಿಜೆಪಿ ಕನಸು ನನಸಾಗಿದೆ. ಪಾಲಿಕೆಯಲ್ಲಿ ಒಟ್ಟು 60 ಸ್ಥಾನಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್‌ಡಿಪಿಐ ಇಬ್ಬರು ಸದಸ್ಯರನ್ನು ಹೊಂದಿದೆ.

ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿತ್ತು. ಎಲ್ಲ ಕಾರ್ಪೊರೇಟರ್‌ಗಳೂ ಮೇಯರ್ ಆಗಲು ಅರ್ಹರಾಗಿದ್ದರು. ಬಿಜೆಪಿ ಆಡಳಿತದಲ್ಲಿದ್ದ, ಸುಧೀರ್ ಶೆಟ್ಟಿ ಕಣ್ಣೂರು, ಕಿರಣ್ ಕೋಡಿಕಲ್, ಜಯಾನಂದ, ಶರತ್ ಮೇಯರ್ ರೇಸ್‌ನಲ್ಲಿರುವ ಪ್ರಮುಖರಾಗಿದ್ದರು.
2019ರ ನವೆಂಬರ್ 12 ರಂದು ನಡೆದಿದ್ದ ಪಾಲಿಕೆ ಚುನಾವಣೆಯ 60 ವಾರ್ಡ್‌ನಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆದ್ದು ಅಧಿಕಾರ ವಹಿಸಿಕೊಂಡಿತ್ತು. ಕಾಂಗ್ರೆಸ್ 14 ಮತ್ತು ಎಸ್‌ಡಿಪಿಐ ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು. 2020ರ ಫೆಬ್ರವರಿ 29 ರಂದು ನಡೆದ ಚುನಾವಣೆಯಲ್ಲಿ ಪ್ರಥಮ ಅವಧಿಗೆ ದಿವಾಕರ್ ಪಾಂಡೇಶ್ವರ ಮೇಯರ್ ಮತ್ತು ಉಪ ಮೇಯರ್ ಆಗಿ ಜಾನಕಿ, ವೇದಾವತಿ ಆಯ್ಕೆಯಾಗಿದ್ದರು. 2021ರ ಮಾರ್ಚ್ 2 ರಂದು ನಡೆದ ದ್ವಿತೀಯ ಅವಧಿಯ ಚುನಾವಣೆಯಲ್ಲಿ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ ಮತ್ತು ಉಪ ಮೇಯರ್ ಆಗಿ ಸುಮಂಗಳಾ ರಾವ್ ಆಯ್ಕೆಯಾಗಿದ್ದರು.

ಈ ವರ್ಷ ಮಾರ್ಚ್ 2 ರಂದು ಮೇಯರ್ - ಉಪ ಮೇಯರ್ ಚುನಾವಣೆ ನಿಗದಿಯಾಗಿದ್ದರೂ, ಬೇರೆ ಕಡೆಯ ಮೀಸಲಾತಿ ಸಮಸ್ಯೆಯಿಂದ ಇಲ್ಲಿಯ ಚುನಾವಣೆಯನ್ನೂ ತಡೆ ಹಿಡಿಯಲಾಗಿತ್ತು. ಹಾಗಾಗಿ ಮುಂದಿನ ಆರು ತಿಂಗಳು ಪ್ರೇಮಾನಂದ ಶೆಟ್ಟಿ ಮತ್ತು ಸುಮಂಗಳಾ ರಾವ್ ಅವಧಿ ಮುಂದುವರಿದಿತ್ತು. ಇಂದು (ಸೆಪ್ಟೆಂಬರ್ 9) ಮೈಸೂರು ವಿಭಾಗೀಯ ಅಧಿಕಾರಿ ಚುನಾವಣೆ ನಡೆಸಿದರು.












Click it and Unblock the Notifications