ಮಂಗಳೂರಿನಲ್ಲಿ ನೀರಿನ ಸಮಸ್ಯೆ: ಮಳೆಗಾಗಿ ದೇವರ ಮೊರೆ ಹೋದ ಜನರು
ಮಂಗಳೂರು, ಮೇ 14: ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ದಿನದಿಂದ ದಿನಕ್ಕೆ ನೀರಿನ ಹಾಹಾಕಾರ ಹೆಚ್ಚುತ್ತಿದ್ದು, ನೀರಿನ ಪೂರೈಕೆ ಜಟಿಲಗೊಳ್ಳುತ್ತಿದೆ. ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಂಗಳೂರು ನಗರದಲ್ಲಿ 3 ದಿನಕ್ಕೊಮ್ಮೆ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ನೀರಿನ ಬರದ ಆತಂಕ ಮತ್ತಷ್ಟು ತೀವ್ರಗೊಂಡಿದ್ದು, ಈಗಾಗಲೇ ನೀರು ಸರಬರಾಜು ವ್ಯವಸ್ಥೆಯಲ್ಲಿ ರೇಷನಿಂಗ್ ಮಾಡಲಾಗುತ್ತಿದೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ 3.85 ಮೀಟರ್‌ಗೆ ಇಳಿಕೆಯಾಗಿದೆ. ಮೇ 16ರಿಂದ 20ವರೆಗೆ(ಬೆಳಗ್ಗೆ) ನೀರು ಪೂರೈಕೆಯಾಗಲಿದ್ದು, ಮತ್ತೆ ಮೇ 20ರಿಂದ 24ರವರೆಗೆ ನೀರು ಸ್ಥಗಿತಗೊಳಿಸಲು ಮಹಾನಗರ ಪಾಲಿಕೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ತುಂಬೆಯ ನಾಲ್ಕು ಮೀಟರ್ ಎತ್ತರದ ಹಳೆ ಡ್ಯಾಂ ಈಗ ಗೋಚರಿಸಲಾರಂಭಿಸಿದ್ದು, ಮುಂಗಾರು ಪೂರ್ವ ಮಳೆ ಬಾರದಿರುವ ಕಾರಣ ಮುಂದಿನ ದಿನಗಳಲ್ಲಿ ನಗರದಲ್ಲಿ ನೀರಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ವ್ಯಕ್ತವಾಗಿದೆ. ಸದ್ಯ ನೀರು ತಲುಪದ, ನೀರಿನ ಸಮಸ್ಯೆ ತೀವ್ರವಾಗಿರುವ ನಗರದ ಎತ್ತರ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ.
ಈ ನಡುವೆ ಶ್ರೀ ಕ್ಷೇತ್ರ ಕದ್ರಿಯಲ್ಲಿ ಮಳೆಗಾಗಿ ಸೀಯಳಾಭಿಷೇಕ ನೆರವೇರಿಸಲಾಗಿದೆ. ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನ, ಸ್ಥಳೀಯರು ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೀಯಾಳಾಭಿಷೇಕ ನೆರವೇರಿಸಲಾಯಿತು.ಶೀಘ್ರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎ.ಜೆ. ಶೆಟ್ಟಿಯವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ಸುಭಿಕ್ಷೆ ಮಳೆ, ಬೆಳೆ, ಫಲಪ್ರಾಪಿತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸೀಯಾಳಾಭಿಷೇಕ ನಡೆಸಲಾಯಿತು.












Click it and Unblock the Notifications