ಮಂಗಳೂರು: ಮಾಣಿ ಮೇಲ್ಸೇತುವೆ ಯೋಜನೆ ಪೂರ್ಣ ಯಾವಾಗ? ಅಧಿಕಾರಿಗಳು ಹೇಳಿದ್ದೇನು?
ಮಂಗಳೂರು, ಫೆಬ್ರವರಿ 15: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಯೋಜನೆಯ ಭಾಗವಾಗಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಾಣಿಯಲ್ಲಿ ನಿರ್ಮಿಸುತ್ತಿರುವ ಮೇಲ್ಸೇತುವೆಯನ್ನು ಏಪ್ರಿಲ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲಿದೆ ಎಂದು ಮಂಗಳೂರು ಯೋಜನಾ ಕಚೇರಿಯ ನಿರ್ದೇಶಕರು ತಿಳಿಸಿದ್ದಾರೆ.
ಫೆಬ್ರವರಿ 14 ಗುರುವಾರ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಮಾಹಿತಿ ನೀಡಿದ ಮಂಗಳೂರು ಯೋಜನಾ ಕಚೇರಿಯ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ, ಬಿ.ಸಿ.ರೋಡ್ ಮತ್ತು ಅಡ್ಡಹೊಳೆ ನಡುವಿನ 63 ಕಿ.ಮೀ. ನಾಲ್ಕು ಪಥಗಳಿಗೆ ಮೇಲ್ದರ್ಜೆಗೇರಿಸಲಾಗಿದೆ. ಫೆಬ್ರವರಿ 2025ರ ವೇಳೆಗೆ ಸಂಪೂರ್ಣ ಯೋಜನೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಅಡ್ಡಹೊಳೆ ಮತ್ತು ಪೆರಿಯಶಾಂತಿ (ಪ್ಯಾಕೇಜ್ I) ನಡುವಿನ 15 ಕಿ.ಮೀ ಮಾರ್ಗದಲ್ಲಿ 11 ಕಿ.ಮೀ ನಾಲ್ಕು ಪಥದ ವಿಸ್ತರಣೆ ಸಿದ್ಧವಾಗಿದೆ. ವಿಸ್ತರಣೆಯು ಈ ಏಪ್ರಿಲ್ ಅಂತ್ಯದ ವೇಳೆಗೆ ಸಿದ್ಧವಾಗಲಿದೆ. ಪೆರಿಯಶಾಂತಿ ಮತ್ತು ಬಿ.ಸಿ.ರೋಡ್ (ಪ್ಯಾಕೇಜ್ II) ನಡುವಿನ 48 ಕಿ.ಮೀ ವ್ಯಾಪ್ತಿಯಲ್ಲಿ 20 ಕಿ.ಮೀ ನಾಲ್ಕು ಪಥಗಳಿಗೆ ವಿಸ್ತರಿಸಲಾಗಿದೆ. ಇನ್ನು 12 ಕಿ.ಮೀ ಉದ್ದದ ನಾಲ್ಕು ಲೇನ್‌ಗಳು ಮೇ ಅಂತ್ಯದ ವೇಳೆಗೆ ಸಿದ್ಧವಾಗಲಿದೆ. ಈ ಮೂಲಕ 32 ಕಿ.ಮೀ ಉದ್ದದ ಚತುಷ್ಪಥ ರಸ್ತೆ ಈ ಮಳೆಗಾಲಕ್ಕೂಮುನ್ನವೇ ಸಿದ್ಧವಾಗಲಿದೆ ಎಂದು ವಿವರಿಸಿದ್ದಾರೆ.
ಕಲ್ಲಡ್ಕದ ಮೇಲ್ಸೇತುವೆಯನ್ನು ಉಲ್ಲೇಖಿಸಿದ ಯೋಜನಾ ನಿರ್ದೇಶಕರು, ಈಗ ಸರ್ವೀಸ್ ರಸ್ತೆಗಳಿಗೆ ಮಳೆನೀರು ಚರಂಡಿಗಳನ್ನು ನಿರ್ಮಿಸಲಾಗುತ್ತಿದೆ. ಈ ಮಳೆಗಾಲದ ಮೊದಲು ಸರ್ವೀಸ್ ರಸ್ತೆಗಳು ಸಿದ್ಧಗೊಳ್ಳಲಿವೆ. ಗುರಿಯಂತೆ ಬಿ.ಸಿ.ರೋಡಿನಲ್ಲಿ ನೇತ್ರಾವತಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆಯನ್ನು ಮಾರ್ಚ್ 1 ರೊಳಗೆ ಪೂರ್ಣಗೊಳಿಸಬೇಕು. ಮೆಲ್ಕಾರ್-ಪಾಣೆಮಂಗಳೂರು ಮೇಲ್ಸೇತುವೆ ಫೆಬ್ರವರಿ ಅಂತ್ಯದ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಅಲ್ಲದೇ ಬಿ.ಸಿ.ರೋಡ್- ಅಡ್ಡಹೊಳೆ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನದ ಯಾವುದೇ ಸಮಸ್ಯೆಗಳು ಬಾಕಿ ಉಳಿದಿಲ್ಲ ಎಂದರು.

ಎಲ್ಲಿಗೆ ಬಂತು ಸಾಣೂರು-ಬಿಕರ್ನಕಟ್ಟೆ ಯೋಜನೆ?
ಸಾಣೂರು (ಕಾರ್ಕಳ)-ಮೂಡುಬಿದಿರೆ-ಬಿಕರ್ನಕಟ್ಟೆ ಹೆದ್ದಾರಿ ಅಗಲೀಕರಣ ಯೋಜನೆಯನ್ನು ಸಭೆಯಲ್ಲಿ ಉಲ್ಲೇಖಿಸಿದ ಅಬ್ದುಲ್ಲಾ ಜಾವೇದ್ ಅಜ್ಮಿ, ಈ ಯೋಜನೆ ಆರಂಭವಾಗಿ 32% ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು. ಅಲ್ಲದೇ ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಹೊಸ ಸೇತುವೆ ಜೂನ್ ಅಂತ್ಯದ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದರು.
ಇನ್ನು ನಂತೂರು, ಕೆಪಿಟಿ ಮೇಲ್ಸೇತುವೆ ಯೋಜನೆಗಳು ನಂತೂರು ಮತ್ತು ಕರ್ನಾಟಕ ಪಾಲಿಟೆಕ್ನಿಕ್ ಮೇಲ್ಸೇತುವೆ ಯೋಜನೆಗಳಿಗೆ ಒಂದೂವರೆ ವರ್ಷಗಳ ಹಿಂದೆಯೇ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗಿತ್ತು. ಅಧಿಕಾರಿಗಳು ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಗುತ್ತಿಗೆದಾರರು ಯೋಜನೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಸಭೆಯಲ್ಲಿ ತಿಳಿಸಿದರು.
ಈ ಬಗ್ಗೆ ವಿವರಿಸಿದ ಅಬ್ದುಲ್ಲಾ ಜಾವೇದ್ ಅಜ್ಮಿ, ಕರ್ನಾಟಕ ಪಾಲಿಟೆಕ್ನಿಕ್ ಕೆಪಿಟಿ ಜಂಕ್ಷನ್‌ನಲ್ಲಿ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಹಸ್ತಾಂತರಿಸದ ಹೊರತು, ಮೇಲ್ಸೇತುವೆ ಯೋಜನೆಯನ್ನು ಪ್ರಾರಂಭಿಸುವ ಮೊದಲು ಸರ್ವಿಸ್ ರಸ್ತೆಗಳನ್ನು ಹಾಕಲಾಗುವುದಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಕೆಪಿಟಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್ ಅವರು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಸೂಚಿಸಿದರು.












Click it and Unblock the Notifications