ಸುಪ್ರಿಂ ಕೋರ್ಟ್ ಬಾರ್ ಬಂದ್ ಬಿಸಿಗೆ ಎಣ್ಣೆ ಪಾರ್ಟಿಗಳು ಕಂಗಾಲು
ಮಂಗಳೂರು, ಜುಲೈ 2: ಸುಪ್ರೀಂ ಕೋರ್ಟ್ ಆದೇಶದಂತೆ ದೇಶಾದ್ಯಂತ ಶನಿವಾರದಿಂದ ಹೆದ್ದಾರಿ ಬದಿಯ ಬಾರ್ ಮತ್ತು ವೈನ್ ಶಾಪ್ ಗಳಿಗೆ ಬೀಗ ಜಡಿಯಲಾಗಿದೆ. ಆದರೆ, ಶನಿವಾರ ವಾರಾಂತ್ಯವಾಗಿದ್ದ ಕಾರಣ ಈ ಬಾರ್ ಬಂದ್ ಬಿಸಿ ಗ್ರಾಮೀಣ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ತಟ್ಟಿದೆ.
ಇದಕ್ಕೆ ನಿದರ್ಶನ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದ ಎಂಎಸ್ಐಎಲ್ ಮದ್ಯದಂಗಡಿಯಲ್ಲಿ ನಿನ್ನೆ ತಡರಾತ್ರಿಯವರೆಗೂ ಪಾನಪ್ರಿಯರು ಸಾಲುಗಟ್ಟಿ ನಿಂತು ಮದ್ಯ ಖರೀದಿಸಿದ್ದಾರೆ. ಅಚ್ಚರಿ ಅಂದ್ರೆ ಸಂಜೆ ಸುಮಾರು ಆರು ಗಂಟೆಯಿಂದ ಆರಂಭವಾದ ಈ ಸಾಲು ತಡರಾತ್ರಿಯವರೆಗೂ ಮುಂದುವರೆದಿತ್ತು. ಕಡಬ ರಾಜ್ಯ ಹೆದ್ದಾರಿಯಾಗಿರೋ ಕಾರಣದಿಂದ ಇಲ್ಲಿನ ಅನೇಕ ಮದ್ಯದಂಗಡಿಗಳಿಗೆ ಬೀಗ ಜಡಿಯಲಾಗಿದೆ.

ಕಡಬದ ಎರಡು ಖಾಸಗಿ ಬಾರ್, ನೆಟ್ಟಣ, ಅಲಂಕಾರು ಮತ್ತು ಪಂಜ ಸೇರಿ ಈ ಭಾಗದ ಅನೇಕ ಮದ್ಯದಂಗಡಿಗಳು ಬಾಗಿಲು ಮುಚ್ಚಿವೆ. ಇದು ಸುಬ್ರಹ್ಮಣ್ಯ ಮತ್ತು ಉಪ್ಪಿನಂಗಡಿ ನಡುವಿನ ರಾಜ್ಯ ಹೆದ್ದಾರಿಯಾಗಿದ್ದು, ನ್ಯಾಯಾಲಯದ ಆದೇಶದಂತೆ ಅಬಕಾರಿ ಇಲಾಖೆ ನಿನ್ನೆ ಕಾರ್ಯಾಚರಣೆ ನಡೆಸಿ ಬೀಗ ಮುದ್ರೆ ಹಾಕಿದೆ.
ಆದ್ರೆ ಕಡಬದ ಪಂಜ ರಸ್ತೆಯಲ್ಲಿರೋ ಏಕೈಕ ಸರ್ಕಾರಿ ಮದ್ಯದಂಗಡಿ ಮಾತ್ರ ಇದರಿಂದ ಹೊರಗುಳಿದಿದ್ದು, ಹೀಗಾಗಿ ಮದ್ಯಪ್ರಿಯರಿಂದ ಈ ಬಾರ್ ತುಂಬಿ ತುಳುಕುತ್ತಿತ್ತು.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ 500 ಮೀಟರ್ ಅಂತರದ ಒಳಗಡೆ ಇರುವ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದರಂತೆ ಜಿಲ್ಲೆಯಲ್ಲಿ ನೋಟಿಫಿಕೇಶನ್ ಆಗದ ಬಾರ್ ಗಳನ್ನು ಜೂನ್ 30ರ ರಾತ್ರಿಯಿಂದಲೇ ಮುಚ್ಚುವಂತೆ ಅಧಿಕಾರಿಗಳು ಬಾರ್ ಮಾಲೀಕರಿಗೆ ಸ್ಪಷ್ಟ ಸಂದೇಶ ನೀಡಿದ್ದು, ಈ ನಿಟ್ಟಿನಲ್ಲಿ ಕಾರ್ಯಚರಣೆ ಆರಂಭಿಸಿದ್ದಾರೆ.
ಜುಲೈ 1 ರಿಂದ ನಗರ ಸೇರಿದಂತೆ ಎಲ್ಲಾ ಭಾಗಗಳಲ್ಲಿ ಮದ್ಯದಂಗಡಿಗಳನ್ಜು ಸಂಪೂರ್ಣ ಸ್ಥಗಿತಗೊಳಿಸುವ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲೆಯ ಒಟ್ಟು 10 ವಲಯಗಳ ತಂಡಗಳು ಭಾಗವಹಿಸಲಿದೆ.
ಈಗಾಗಲೇ ರಾಜ್ಯ ಸರ್ಕಾರ ನೋಟಿಫಿಕೇಶನ್ ಹೊರಡಿಸಿ, ಜಿಲ್ಲೆಯ 453 ಮದ್ಯದಂಗಡಿಗಳಲ್ಲಿ 254ಕ್ಕೆ ಲೈಸೆನ್ಸ್ ನವೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಲೈಸೆನ್ಸ್ ದಾರರು ಈಗಾಗಲೇ ಚಲನ್ ಕಟ್ಟಿ ನವೀಕರಣ ಮಾಡಿಸಿಕೊಂಡಿದ್ದಾರೆ.
ನೋಟಿಫಿಕೇಶನ್ ನಲ್ಲೂ ನಗರದ ಬಾರ್ ಗಳಿಗೆ ಅನುಮತಿ ಸಿಕ್ಕಿಲ್ಲ. ಗ್ರಾಮಾಂತರ ಪ್ರದೇಶದ ಬಾರ್ ಗಳಿಗೆ ಮಾತ್ರ ದಕ್ಕಿದ್ದು, ಇದರಿಂದ ಈ ಬಾರ್ ಗಳನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications