ಮೋದಿ ಬರುವ ದಿನದಂದು ಸಾರ್ವತ್ರಿಕ ರಜೆ ರದ್ದುಗೊಳಿಸಿದ ಮಂಗಳೂರು ವಿಶ್ವವಿದ್ಯಾಲಯ
ಮಂಗಳೂರು, ಏಪ್ರಿಲ್ 12:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಣ ರಂಗೇರತೊಡಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿಯ ಹೋರಾಟ ಆರಂಭವಾಗಿದೆ. ಈ ನಡುವೆ ಪ್ರಧಾನಿ ಮೋದಿ ಏಪ್ರಿಲ್ 13 ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.
ಅಂದು ಮೋದಿ ಬಿಜೆಪಿಯ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, 1 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.
ಇದರ ನಡುವೆ ಮಂಗಳೂರು ವಿಶ್ವವಿದ್ಯಾಲಯ ಹೊರಡಿಸಿರುವ ಆದೇಶ ಪತ್ರ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮೋದಿ ಅವರ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಭಾಗವಹಿಸದಂತೆ ತಡೆಯುವ ದೃಷ್ಟಿಯಿಂದ ಏಪ್ರಿಲ್ 13 ರಂದು ಎರಡನೇ ಶನಿವಾರದ ರಜೆಯನ್ನು ವಿಶ್ವ ವಿದ್ಯಾನಿಲಯ ರದ್ದುಗೊಳಿಸಿದೆ.

ಆದರೆ ಆದೇಶ ಪತ್ರದಲ್ಲಿ ರಜೆ ರದ್ದುಗೊಳಿಸಿಕ್ಕೆ ಕಾರಣ ನೀಡಲಾಗಿಲ್ಲ . ಏಪ್ರಿಲ್ 13 ರಂದು ಇದ್ದ ಸಾರ್ವತ್ರಿಕ ರಜಾ ದಿನವನ್ನು ಕರ್ತವ್ಯದ ದಿನವೆಂದು ಪರಿಗಣಿಸಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸದರಿ ದಿನದ ಬದಲಿಗೆ ಏಪ್ರಿಲ್ 20 ರಂದು ಶನಿವಾರ ರಜಾ ದಿನವೆಂದು ಘೋಷಿಸಿ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
ಈ ಆದೇಶ ಪತ್ರದ ವಿರುದ್ಧ ಈಗ ಭಾರೀ ವಿರೋದ ವ್ಯಕ್ತವಾಗುತ್ತಿದ್ದು, ಉದ್ದೇಶಪೂರ್ವಕವಾಗಿ ಮಂಗಳೂರು ವಿಶ್ವವಿದ್ಯಾಲಯ ಈ ಆದೇಶ ಪತ್ರ ಹೊರಡಿಸಿದೆ ಎಂದು ದೂರಲಾಗುತ್ತಿದೆ. ಇದರ ಹಿಂದೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯುಟಿ ಖಾದರ್ ಅವರ ಕುಮ್ಮಕ್ಕು ಇದೆ ಎಂದು ಆರೋಪಿಸಲಾಗುತ್ತಿದೆ.

ಏಪ್ರಿಲ್ 13 ರಂದು ಮೋದಿ ಅವರ ಕಾರ್ಯಕ್ರಮಕ್ಕೆ ಸಿಬ್ಬಂದಿಗಳು ಭಾಗವಹಿಸಬಾರದೆಂದು ತಡೆಯುವ ದೃಷ್ಟಿಯಿಂದಲೇ ಈ ಆದೇಶ ಪತ್ರ ಹೊರಡಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.











Click it and Unblock the Notifications