ಪ್ರಕಾಶ್ ಪೂಜಾರಿ ಕೊಲೆ ಯತ್ನ: ಅಹ್ಮದ್ ಖುರೇಶಿಗೆ ಜಾಮೀನು
ಮಂಗಳೂರು, ಮೇ 07 : 2016 ಫೆಬ್ರವರಿ 21ರಂದು ನಡೆದ ಪ್ರಕಾಶ್ ಪೂಜಾರಿ ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿ ಅಹ್ಮದ್ ಖುರೇಶಿಗೆ ಶನಿವಾರ ಮಂಗಳೂರಿನ 6ನೇ ಹೆಚ್ಚುವರಿ ಸೆಷನ್ ನ್ಯಾಯಾಲಯವು ಜಾಮೀನು ನೀಡಿದೆ.
ತಿಂಗಳಿಗೆ ಮೂರು ಬಾರಿ ಸ್ಥಳೀಯ ಠಾಣೆಗೆ ಹಾಜರಾಗಿ ತನಿಖೆಗೆ ಸಹಕಾರ ನೀಡಬೇಕು, ಒಂದು ಲಕ್ಷ ರು. ಬಾಂಡ್ ಮಾಡಬೇಕು ಎಂಬ ಷರತ್ತಿನೊಂದಿಗೆ ನ್ಯಾಯಾಧೀಶ ಪುಟ್ಟರಂಗ ಸ್ವಾಮಿ ಜಾಮೀನು ಮಂಜೂರು ಮಾಡಿದ್ದಾರೆ. [ಮಂಗಳೂರು: ವಾಟ್ಸಾಪಲ್ಲಿ ಅಹ್ಮದ್ ಖುರೇಶಿ ಸಾವಿನ ವದಂತಿ]

ನ್ಯಾಯಾಲಯದ ಆದೇಶದಂತೆ ಖುರೇಶಿ 1, 10 ಮತ್ತು 20ನೇ ತಾರೀಖಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಬೇಕು. ಅಲ್ಲದೆ, ಪಾಸ್‌ಪೋರ್ಟ್ ಹೊಂದಿದ್ದರೆ ಅದನ್ನು ಠಾಣೆಗೆ ಒಪ್ಪಿಸಬೇಕೆಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
2016 ಫೆಬ್ರವರಿ 21ರಂದು ಜೊಕ್ಕಟ್ಟೆ ಕೋಡಿಕೆರೆ ಪ್ರಕಾಶ್ ಪೂಜಾರಿ ಅಂಗಡಿಗೆ ತರಳುತ್ತಿರುವಾಗ ಹಿಂದುಗಡೆಯಿಂದ ಬಂದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.
ಈ ಪ್ರಕರಣದಲ್ಲಿ ಸುಮಾರು 6 ದಿನಗಳ ಕಾಲ ಅಹ್ಮದ್ ಖುರೇಶಿಯನ್ನು ಸುರತ್ಕಲ್ ಪೊಲೀಸರು ಅಕ್ರಮವಾಗಿ ಬಂಧಿಸಿ ದೌರ್ಜನ್ಯ ಎಸಗಿದ್ದು, ಆತನ ಕಿಡ್ನಿ ನಿಷ್ಕ್ರಿಯಗೊಂಡಿದೆ ಎಂದು ಖುರೇಶಿಯ ಕುಟಂಬಸ್ಥರು ಆರೋಪ ಮಾಡಿದ್ದರು.
ಸಧ್ಯ ಖುರೇಶಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖುರೇಶಿ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ವಿರುದ್ಧ ಹಲವು ಸಂಘ-ಸಂಸ್ಥೆಗಳು ಪ್ರತಿಭಟನೆಗಳು ಮಾಡಿದ್ದವು.












Click it and Unblock the Notifications