ಮಂಗಳೂರು: ಮಾರಕಾಸ್ತ್ರದಿಂದ ಹಲ್ಲೆ, ವ್ಯಕ್ತಿ ಸ್ಥಳದಲ್ಲೇ ಸಾವು
ಮಂಗಳೂರು, ಅಕ್ಟೋಬರ್, 29 : ರೌಡಿಶೀಟರ್ ಒಬ್ಬನನ್ನು ನಗರದ ಹೊರವಲಯದ ವಾಮಂಜೂರು-ಮೂಡುಶೆಡ್ಡೆ ಎಂಬಲ್ಲಿ ದುಷ್ಕರ್ಮಿಗಳ ತಂಡ ಕೊಲೆಗೈದ ಘಟನೆ ಅಕ್ಟೋಬರ್ 29ರ ಗುರುವಾರ ಬೆಳಗಿನ ಜಾವ ನಡೆದಿದೆ.
ಮೂಡುಶೆಡ್ಡೆ ನಿವಾಸಿ ವಿಜೇತ್(29) ಎಂಬಾತನೇ ಸ್ಥಳದಲ್ಲಿಯೇ ಸಾವನ್ನಪ್ಪಿದ ವ್ಯಕ್ತಿ. ಕೆಲವರ್ಷಗಳಿಂದ ಈತನ ತಂಡದ ಸದಸ್ಯರ ಮಧ್ಯೆ ವೈಮನಸ್ಸು ಮೂಡಿದ್ದು, ಇದೇ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈಗಾಗಲೇ ಹಂತಕರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.[ಪುಣೆಯಲ್ಲಿ ಪತ್ನಿ ರುಂಡ ಕತ್ತರಿಸಿ ರಸ್ತೆಗಿಳಿದ ಪತಿ]

ಘಟನೆಯ ವಿವರ:
ದುಷ್ಕರ್ಮಿಗಳ ತಂಡಕ್ಕೆ ಬಲಿಯಾದ ವಿಜೇತ್ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಈತ 2011ರ ನವೆಂಬರ್ ತಿಂಗಳಲ್ಲಿ ಮೂಡುಶೆಡ್ಡೆ ಸಮೀಪದ ಶಿವನಗರ ಎಂಬಲ್ಲಿ ನಡೆದಿದ್ದ ರೌಡಿಶೀಟರ್ ಮುರುಗೇಶ್ ಹಾಗೂ ಆತನ ಭಾವ ಉಪೇಂದ್ರ ಎಂಬುವರ ಕೊಲೆ ಪ್ರಕರಣದಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ ಎನ್ನಲಾಗಿದೆ.
ಈಗಾಗಲೇ ವಿಜೇತ್ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣವೂ ಸೇರಿದಂತೆ ಒಟ್ಟು ಮೂರು ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿತ್ತು. ಬುಧವಾರ ರಾತ್ರಿಯೇ ಈತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ತಂಡ ಗುರುವಾರ ಬೆಳಿಗ್ಗೆ ಮೂಡುಶೆಡ್ಡೆ ಜಂಕ್ಷನ್‍ನಲ್ಲಿಯೇ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪರಿಣಾಮ ಗಂಭೀರ ಗಾಯಗೊಳಗಾದ ವಿಜೇತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.[ಮಂಗಳೂರು: ಹಂತಕ ರವೀಂದ್ರ ಪೂಜಾರಿ ತಂಡದ ಐವರ ಬಂಧನ]
ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವೆನ್ಲಾಕ್ ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಶಂಕಿತರ ಬಂಧನಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications