ತೆಲಂಗಾಣ, ಕತಾರ್‌ನಲ್ಲಿ ಹಾರಾಡಲಿದೆ ಕುಡ್ಲದ ಗಾಳಿಪಟ: ಅಯೋಧ್ಯೆಯಲ್ಲೂ ಅವಕಾಶ ಸಾಧ್ಯತೆ
ಮಂಗಳೂರು, ಜನವರಿ 10: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಾಟದಲ್ಲಿ ಖ್ಯಾತಿ ಹೊಂದಿರುವ 'ಟೀಂ ಮಂಗಳೂರು' ಇದೀಗ ತೆಲಂಗಾಣ, ಕತಾರ್‌ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಟೀಂ ಮಂಗಳೂರು ತಂಡದ ಬೃಹತ್ ಗಾತ್ರದ ಕಥಕ್ಕಳಿ ಗಾಳಿಪಟ ಹಾರಾಡಲಿದೆ.
ಟೀಂ ಮಂಗಳೂರು ತಂಡದ ಸರ್ವೇಶ್ ರಾವ್ ರವರ ನೇತೃತ್ವದಲ್ಲಿ ಈ ಕಥಕ್ಕಳಿ ಗಾಳಿಪಟ ಬಾನಂಗಳದಲ್ಲಿ ಹಾರಾಡಲಿದೆ. ತೆಲಂಗಾಣದಲ್ಲಿ ಜನವರಿ 13-14ರಂದು ನಡೆಯುವ ಗಾಳಿಪಟ ಉತ್ಸವದಲ್ಲಿ ರಾಜ್ಯದ ಪರವಾಗಿ ಮಂಗಳೂರಿನ ಕಥಕ್ಕಳಿ ಗಾಳಿಪಟ ಹಾರಲಿದೆ.

12ಅಡಿ ಅಗಲ ಹಾಗೂ 38 ಅಡಿ ಉದ್ದವಿರುವ ಈ ಕಥಕ್ಕಳಿ ಗಾಳಿಪಟಕ್ಕೆ ಅಗತ್ಯವಿರುವ ರಿಪ್ ಸ್ಟಾಕ್ ನೈಲಾನ್ ಫ್ಯಾಬ್ರಿಕ್ ಮೆಟಿರಿಯಲ್ ಅನ್ನು ಇಂಗ್ಲೆಂಡ್ ನಿಂದ ತರಿಸಲಾಗಿದೆ. ಇದು ಪ್ಯಾರಚೂಟ್ ತಯಾರಿಯಲ್ಲಿ ಬಳಕೆಯಾಗುವ ಬಟ್ಟೆಯಾಗಿದೆ. ಗಾಳಿಪಟಕ್ಕೆ ಅಗ್ಯವಿರುವ ಬಿದಿರನ್ನು ಗೋವಾ ರತ್ನಗಿರಿಯ ವೆನ್ ರೂಲಾದಿಂದ ತರಿಸಲಾಗಿದೆ.
ಕಲಾವಿದ, ಪರಿಸರವಾದಿ ದಿನೇಶ್ ಹೊಳ್ಳ ಅವರು ಕಥಕ್ಕಳಿ ಗಾಳಿಪಟಕ್ಕೆ ಅಗತ್ಯವಿರುವ ನಕಾಶೆ ರಚಿಸಿ, ಕಲರ್ ಕಾಂಬಿನೇಷನ್ ಅನ್ನು ಆಯ್ಕೆ ಮಾಡಿದ್ದಾರೆ. ಸರ್ವೇಶ್ ರಾವ್‌ರವರ ನಿರ್ದೇಶನದಲ್ಲಿ ತಂಡವು ಈ ಗಾಳಿಪಟ ರಚಿಸಿದೆ. ತೆಲಂಗಾಣದ ಬಳಿಕ ಈ ಗಾಳಿಪಟ ಜನವರಿ 24ರಿಂದ ಫೆಬ್ರವರಿ 4ರವರೆಗೆ ಕತಾರ್‌ನಲ್ಲಿ ಈ ಗಾಳಿಪಟ ಹಾರಲಿದೆ. ಜೊತೆಗೆ ಅಯೋಧ್ಯೆಯಲ್ಲಿಯೂ ಗಾಳಿಪಟ ಹಾರಾಟಕ್ಕೆ ಅವಕಾಶ ದೊರೆಯುವ ಸಾಧ್ಯತೆಯೂ ಇದೆಯಂತೆ.
ಟೀಂ ಮಂಗಳೂರು ತಂಡ ಸುಮಾರಷ್ಟು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಾಟ ನಡೆಸಿದೆ. ಇವರಲ್ಲಿ ಕಥಕ್ಕಳಿ ಸೇರಿದಂತೆ ಯಕ್ಷಗಾನ, ಗರುಡ, ವಿಭೀಷಣ, ಬಟರ್ ಫ್ಲೈ ಮುಂತಾದ ಗಾಳಿಪಟಗಳು ಹಾರಾಟ ನಡೆಸಿದೆ. ಈವರೆಗೆ ಈ ತಂಡ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ಟರ್ಕಿ, ಕಾಂಬೋಡಿಯ, ಉಕ್ರೇನ್, ಕುವೈತ್, ಥಾಯ್ಲ್ಯಾಂಡ್ ಮೊದಲಾದೆಡೆ ಸಾಂಪ್ರದಾಯಿಕ ಶೈಲಿಯ ಗಾಳಿಪಟ ಹಾರಿಸಿದೆ.
ಈ ಬಾರಿ ಫೆಬ್ರವರಿ ಮಧ್ಯಭಾಗದ ಬಳಿಕ ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಟೀಂ ಮಂಗಳೂರು ತಂಡ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವನ್ನು ಆಯೋಜಿಸುವ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಡಿಸಿಯವರೂ ಸ್ಪಂದನೆ ನೀಡಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮಂಗಳೂರಿನಲ್ಲಿಯೂ ದೇಶ - ವಿದೇಶಗಳ ಗಾಳಿಪಟಗಳು ಹಾರಾಟ ನಡೆಸುವುದು ನಿಶ್ಚಿತವಾಗಿದೆ.












Click it and Unblock the Notifications