ಮಂಗಳೂರು; ಜಾಹೀರಾತು ಕ್ಷೇತ್ರದಲ್ಲೂ ಮಿಂಚು ಹರಿಸಿದ ಕಂಬಳ ಓಟಗಾರ ಶ್ರೀನಿವಾಸ ಗೌಡ
ಮಂಗಳೂರು, ಡಿಸೆಂಬರ್, 28: ಕಂಬಳದ ದಾಖಲೆಯ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ್ ಗೌಡ ಚಿನ್ನಾಭರಣಗಳ ಜಾಹೀರಾತುವಿನ ಮಾಡೆಲ್ ಆಗಿ ಮಿಂಚಿದ್ದಾರೆ. ಚಿನ್ನಾಭರಣ ಕಂಪನಿ ತುಳುನಾಡಿನ ಜಾನಪದೀಯ ಆಚರಣೆ ಕಂಬಳ ಓಟಗಾರ ಶ್ರೀನಿವಾಸ್ ಗೌಡನನ್ನು ತಮ್ಮ ಬ್ರಾಂಡ್‌ನ ರಾಯಭಾರಿ ಆಗಿ ಗುರುತಿಸಿದ್ದು, ಕರಾವಳಿಯೆಲ್ಲೆಡೆ ಕಂಪೆನಿಯ ನೂತನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಸಿರು ಕಾನನದ ನಡುವೆ ಕಟ್ಟುಮಸ್ತಾದ ದೇಹ ಹೊಂದಿರುವ ಕಂಬಳ ಓಟಗಾರ ಶ್ರೀನಿವಾಸ ಗೌಡ ಮೈ ತುಂಬಾ ಚಿನ್ನಾಭರಣ ಧರಿಸಿ ಕಂಬಳ ಕೋಣವನ್ನು ಹಿಡಿದಿರುವ ಫೋಟೋ ಇದೀಗ ಕರಾವಳಿಯೆಲ್ಲೆಡೆ ಜಾಹೀರಾತು ಫ್ಲೆಕ್ಸ್‌ಗಳಲ್ಲಿ ರಾರಾಜಿಸುತ್ತಿದೆ. ಸ್ಥಳೀಯ ಪ್ರತಿಭೆಗೆ ಅವಕಾಶ ನೀಡುವುದರ ಜೊತೆಗೆ ಕಂಪೆನಿಯ ವಿನೂತನ ಪ್ರಚಾರದ ಶೈಲಿಗೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫ್ಲೆಕ್ಸ್‌ನಲ್ಲಿ ನಗುಮುಖದ ಮೂಲಕ ಶ್ರೀನಿವಾಸ ಗೌಡ ಫೋಟೋಗೆ ಫೋಸ್ ನೀಡಿದ್ದಾರೆ. ಕೈಬೆರಳುಗಳ ತುಂಬಾ ವೈವಿಧ್ಯಮಯ ಉಂಗುರಗಳು, ಕೈಗೊಂದು ಕಡಗ, ಬ್ರಾಸ್‌ಲೇಟ್, ಪೆಂಡೆಂಟ್ ಸಹಿತ ಚಿನ್ನದ ಹಾರ ಧರಿಸಿ ಪುರುಷರೂ ಸ್ವರ್ಣಾಲಂಕಾರ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಶ್ರೀನಿವಾಸ್ ಗೌಡರಿಗೆ ಸಾಥ್ ನೀಡಿದ ಕೋಣ "ಅಪ್ಪು"
ಶ್ರೀನಿವಾಸ ಗೌಡರಿಗೆ ಕಂಬಳದ ಅತೀ ವೇಗದ ಓಟದ ಕೋಣ "ಅಪ್ಪು" ಸಾಥ್ ನೀಡಿರುವುದು ಗಮನ ಸೆಳೆದಿದೆ. ಮಿಜಾರು ಪ್ರಸಾದ್ ನಿಲಯದ ಶಕ್ತಿ ಪ್ರಸಾದ್ ಶೆಟ್ಟಿಯವರ ಮಾಲಿಕತ್ವದ ಅಪ್ಪು ಕೋಣ ಈಗಾಗಲೇ ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ಗೆದ್ದಿದೆ. ಈ ಕೋಣವನ್ನು ಓಡಿಸುವುದು ಕೂಡ ಶ್ರೀನಿವಾಸ್ ಗೌಡರೇ ಆಗಿದ್ದಾರೆ. ಹೀಗಾಗಿ ಕೋಣವೂ ತನ್ನ ಸಾರಥಿ ಜೊತೆ ಫೋಟೋದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದೆ.

ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ರೀನಿವಾಸ
ಕಂಬಳದಲ್ಲಿ ಅತೀ ವೇಗದ ಓಟಗಾರನಾಗಿ ಪ್ರಸಿದ್ಧಿ ಪಡೆದ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ದಾಖಲೆ ಸೃಷ್ಟಿಸುವ ಮುನ್ನವೇ ಭಾರತೀಯ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಬಾಹುಬಲಿಯಲ್ಲಿ ಕೋಣ ಓಡಿಸುವ ಸಣ್ಣ ಪಾತ್ರದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಶೂಟಿಂಗ್ ಹಂತದಲ್ಲಿರುವ ಪಂಚಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಬಿರ್ದ್‌ದ ಕಂಬಳ ಚಿತ್ರದಲ್ಲೂ ಶ್ರೀನಿವಾಸ ಗೌಡ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ಈಗ ಮಾಡೆಲಿಂಗ್ ಕ್ಷೇತ್ರದಲ್ಲೂ ಅವರು ವೇಗವಾಗಿ ಬೆಳೆಯುತ್ತಿದ್ದಾರೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದೇನೆ. ಆದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.
ಆಭರಣ ಕಂಪನಿಯವರು ಹೇಳಿದ್ದೇನು?
ಇನ್ನು ಈ ಹೊಸ ಪ್ರಯೋಗದ ಬಗ್ಗೆ ಆಭರಣ ಕಂಪನಿಯ ಮಹೇಶ್ ಕಾಮತ್ ಮಾತನಾಡಿ, ನಮ್ಮ ಸಂಸ್ಥೆಯ ಜಾಹೀರಾತುಗಳಲ್ಲಿ ಸ್ಥಳೀಯ ಪ್ರತಿಭೆ, ಸ್ಥಳೀಯ ವಿಚಾರಣೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಕರಾವಳಿಯ ಪ್ರತಿಭೆಗಳನ್ನು,ಇಲ್ಲಿನ ಸೊಬಗು ವೈಭವವನ್ನು ಎಲ್ಲೆಡೆ ಪರಿಚಯಿಸಬೇಕೆಂಬ ಉತ್ಸಾಹದಿಂದ ಈ ಕಾರ್ಯಕ್ಕೆ ಇಳಿದಿದ್ದೇವೆ. ಉಡುಪಿಯ ಶಂಕರಪುರ ಮಲ್ಲಿಗೆ, ಅಡಕೆ ಕೃಷಿಯ ರೈತ ಹೀಗೆ ಹತ್ತು ಹಲವು ಪರಿಕಲ್ಪನೆಗಳನ್ನು
ಪರಿಚಯಿಸಿದ್ದೇವೆ. ಮಾಡೆಲಿಂಗ್ ತಾರೆ ಕರಾವಳಿಯ ಸಾಧಕಿ ಸಿನಿ ಶೆಟ್ಟಿಯವರನ್ನೂ ಇದಕ್ಕೆ ಬಳಸಿ ಕೊಳ್ಳುತ್ತಿದ್ದೇವೆ. ಕರಾವಳಿಯ ಸಾಂಸ್ಕೃತಿಕ ವೈಭವ, ಪ್ರಾಕೃತಿಕ ಸೊಬಗು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವುದನ್ನೂ ತೋರಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.












Click it and Unblock the Notifications