ಮಂಗ್ಳೂರು ಮೇಯರ್ ಸರ್ವಾಧಿಕಾರಿ ಧೋರಣೆಗೆ ಆಕ್ರೋಶ
ಮಂಗಳೂರು, ಮಾರ್ಚ್ 30 : ನೂತನವಾಗಿ ಮಂಗಳೂರು ಮೇಯರ್ ಆಗಿ ಆಯ್ಕೆಯಾಗಿರು ಕವಿತಾ ಸನಿಲ್ ಅವರ ವಿರುದ್ಧ ಮೊದಲ ಪಾಲಿಕೆ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ವಿವಿಧ ಯೋಜನೆಗಳ ಅನುದಾನವನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮವನ್ನು ಸ್ಥಾಯಿ ಸಮಿತಿ ಅಧ್ಯಕ್ಷರ ಗಮನಕ್ಕೆ ತಾರದೆ ಇರುವುದರಿಂದ ಗುರುವಾರ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಮೇಯರ್ ಕವಿತಾ ಸನಿಲ್ ಅವರ ವಿರುದ್ಧ ಪ್ರತಿಪಕ್ಷದ ಸದಸ್ಯರ ಜತೆ ಸೇರಿಕೊಂಡು ಸ್ವ ಪಕ್ಷದವರೂ ಪ್ರತಿಭಟನೆ ನಡೆಸಿದರು.[ಮಂಗಳೂರಿಗೆ 100 ಕೋಟಿ ರು.ನೀಡುವಂತೆ ಸಿದ್ದರಾಮಯ್ಯಗೆ ಮನವಿ]

ನಾಳೆ (ಮಾರ್ಚ್ 31ರಂದು) ವಿವಿಧ ಯೋಜನೆಗಳ ಅನುದಾನವನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮವನ್ನು ಸ್ಥಾಯಿ ಸಮಿತಿ ಅಧ್ಯಕ್ಷರ ಗಮನಕ್ಕೆ ತಾರದೆ ಆಯೋಜಿಸಿದ ಮೇಯರ್ ಅವರದ್ದು ಸರ್ವಾಧಿಕಾರಿ ಧೋರಣೆ ಎಂದು ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ ಅವರು ನೆಲದ ಮೇಲೆ ಕುಳಿತು ಪ್ರತಿಭಟನೆ ಮಾಡಿದರು.
ನಾಗವೇಣಿ ಕ್ರಮವನ್ನು ಬೆಂಬಲಿಸಿ ಬಿಜೆಪಿ ಮತ್ತು ಆಡಳಿತ ರೂಢ ಕಾಂಗ್ರೆಸ್ ಸದಸ್ಯರು ಕೂಡಾ ಮೇಯರ್ ವಿರುದ್ಧ ಕಿಡಿಕಾರಿದರು. ಈ ಕಾರ್ಯಕ್ರಮ ಕಳೆದ ವರ್ಷವೇ ಆಗಬೇಕಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಅನುಮತಿ ತಡವಾಗಿ ದೊರಕಿದ್ದರಿಂದ ಕಾರ್ಯಕ್ರಮವನ್ನು ತಡವಾಗಿ ಆಯೋಜಿಸಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ಸಮಜಾಯಿಶಿ ನೀಡಿದರು.
ಆದರೆ, ಈ ಸಮರ್ಥನೆಗೆ ಸೊಪ್ಪು ಹಾಕದ ಬಹುತೇಕ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ಗುರುವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಎಂಆರ್‌ಪಿಎಲ್, ಎಂಎಸ್‌ಇಝೆಡ್, ಎಂಸಿಎಫ್ ಕಡಿಮೆ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಲು ಸೂಚಿಸಲಾಗಿದೆ. ಮನಪಾ ವ್ಯಾಪ್ತಿಯೊಳಗೆ ನೀರು ಪೂರೈಕೆಗೆ 2 ಕೋಟಿ ರೂ. ಮತ್ತು ಜಿಲ್ಲೆಯ ನೀರು ಪೂರೈಕೆ ಮತ್ತು ಪೈಪ್‌ಲೈನ್ ದುರಸ್ತಿಗಾಗಿ 6 ಕೋಟಿ ರೂ. ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ 5,868 ಬೋರ್‌ವೆಲ್ ಮತ್ತು 1,565 ವೆಂಟೆಡ್ ಡ್ಯಾಂಗಳಿವೆ. ಆ ಪೈಕಿ 427 ಡ್ಯಾಂಗಳ ದುರಸ್ತಿಗೆ 2.14 ಕೋಟಿ ರೂ. ಬಿಡುಗಡೆಯಾಗಿದೆ. ಈಗಾಗಲೇ 174 ಡ್ಯಾಂಗಳ ದುರಸ್ತಿ ಕಾರ್ಯ ಆರಂಭವಾಗಿದೆ ಎಂದರು.












Click it and Unblock the Notifications