ಮಂಗಳೂರು: ಮಾಸ್ಕ್ ಡ್ರೈವ್ ದಾಳಿ; ಜಿಲ್ಲಾಧಿಕಾರಿ ಕ್ರಮಕ್ಕೆ ಕಾಂಗ್ರೆಸ್ ನಾಯಕಿ ಗರಂ!
ಮಂಗಳೂರು, ಮಾರ್ಚ್ 25: "ಯಾವುದೇ ಸೂಚನೆ ನೀಡದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಏಕಾಏಕಿ ಡ್ರೈವ್ ದಾಳಿ ನಡೆಸಿ ಅಂಗಡಿ ಹಾಗೂ ಮಳಿಗೆಗಳಿಗೆ ದಂಡ ವಿಧಿಸಿರುವುದು ಸರಿಯಾದ ಕ್ರಮವಲ್ಲ" ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಮಾಸ್ಕ್ ಧರಿಸದ ಕಾರಣಕ್ಕಾಗಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಅಪರಾಧಿಯಂತೆ ಬಂಧಿಸಿದ್ದಾರೆ" ಎಂದು ಕಿಡಿಕಾರಿದರು.

ಮಾಸ್ಕ್ ಧರಿಸದಕ್ಕೆ ದಂಡ ವಿಧಿಸಲಿ, ಆದರೆ ಬಂಧಿಸುವ ಅಧಿಕಾರ ಇವರಿಗೆ ಯಾರು ನೀಡಿದರು ಎಂದು ಪ್ರಶ್ನಿಸಿದ್ದಾರೆ. ಕೋವಿಡ್ ನಿಂದ ಜನರು ಅರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಆದರೆ ಜಿಲ್ಲಾಡಳಿತ ದೊಡ್ಡ ಮಾಲ್ ಗಳಿಗೆ ಸಾವಿರ ದಂಡ ವಿಧಿಸಿದರೆ, ಸಣ್ಣ ಸಣ್ಣ ವ್ಯಾಪಾರ ಮಾಡುವ ಅಂಗಡಿಗಳ ಮೇಲೆ 4ರಿಂದ 5 ಸಾವಿರ ತನಕ ದಂಡ ವಿಧಿಸಿದ್ದು ತಪ್ಪು. ಈಗ ಮತ್ತೆ ಜನರಿಂದ ಸುಲಿಗೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಶನಿವಾರ, ಭಾನುವಾರ ನದಿ ಉತ್ಸವದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು ಹಾಗೂ ಡಿಜೆ ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲಿ ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಅಲ್ಲಿ ಇಲ್ಲದ ಕೊರೊನಾ ಮರುದಿನ ಎಲ್ಲಿಂದ ಬಂತು? ಜನರ ಮೇಲೆ ಜಿಲ್ಲಾಧಿಕಾರಿ ತೋರುವ ದರ್ಪ ಸರಿಯಲ್ಲ ಎಂದು ಪ್ರತಿಭಾ ಕುಳಾಯಿ ಟೀಕಿಸಿದ್ದಾರೆ.












Click it and Unblock the Notifications