ಮಂಗಳೂರು:ಉದ್ಘಾಟನೆಗೂ ಮೊದಲೇ ಪಾಳು ಬಿದ್ದ ಕೋಟಿ ರೂಪಾಯಿ ಮೌಲ್ಯದ ಕ್ಲಾಕ್‌ಟವರ್
ಮಂಗಳೂರಿನ ಸೌಂದರ್ಯಕ್ಕೆ ಹಿಡಿದ ಕನ್ನಡಿಯಂತಿರುವ ಇದು 2018ರಲ್ಲಿ ನಿರ್ಮಾಣಗೊಂಡಿತು. ಸ್ಮಾರ್ಟ್ ಸಿಟಿ ಕಾಮಗಾರಿಯಡಿಯಲ್ಲಿ ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿತು. ಸದ್ಯ ಸೂಕ್ತ ನಿರ್ವಹಣೆಯಿಲ್ಲದೆ ದುಃಸ್ಥಿತಿ ತಲುಪಿದೆ.
ಮಂಗಳೂರು, ಮಾರ್ಚ್ 3: ಮಂಗಳೂರು ನಗರದ ಸೌಂದರ್ಯವರ್ಧನೆಗೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತದೆ. ಇಂತಹ ಸೌಂದರ್ಯ ಪ್ರಜ್ಞೆಯಿಂದಲೇ ನಿರ್ಮಾಣವಾಗಿರುವುದು ಮಂಗಳೂರಿನ ಹೃದಯಭಾಗದಲ್ಲಿರುವ ಕ್ಲಾಕ್ ಟವರ್. ಆದರೆ ಇದೀಗ ಈ ಕ್ಲಾಕ್ ಟವರ್ ಸೂಕ್ತ ನಿರ್ವಹಣೆಯಿಲ್ಲದೆ ದುಃಸ್ಥಿತಿ ತಲುಪಿದೆ.
ಮಂಗಳೂರಿನ ಸೌಂದರ್ಯಕ್ಕೆ ಹಿಡಿದ ಕನ್ನಡಿಯಂತಿರುವ ಇದು 2018ರಲ್ಲಿ ನಿರ್ಮಾಣಗೊಂಡಿತು. ಸ್ಮಾರ್ಟ್ ಸಿಟಿ ಕಾಮಗಾರಿಯಡಿಯಲ್ಲಿ ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿತು. ಇತ್ತೀಚೆಗಷ್ಟೇ ಇದರ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಅಧಿಕೃತವಾಗಿ ಲೋಕಾರ್ಪಣೆಯೂ ಆಗಿಲ್ಲ. ಆದರೆ ಅದಾಗಲೇ ಕ್ಲಾಕ್ ಟವರ್ ಸರಿಯಾದ ನಿರ್ವಹಣೆಯಿಲ್ಲದೆ ದುಃಸ್ಥಿತಿಯನ್ನು ತಲುಪಿದೆ. ಕ್ಲಾಕ್ ಟವರ್‌ನ ಕಾರಂಜಿ ಚಾಲನೆಯಲ್ಲಿಲ್ಲ. ಸುತ್ತಲಿನ ಗಾರ್ಡನ್‌ಗೂ ನೀರು ಸರಬರಾಜು ಇಲ್ಲದೆ ಗಿಡಗಳು ಸೊರಗಿ ಹೋಗಿದೆ.

75 ಅಡಿ ಎತ್ತರದ ಕ್ಲಾಕ್ ಟವರ್‌ನ ಸುತ್ತಲೂ ನಾಲ್ಕು ಬೃಹತ್ ಗಡಿಯಾರಗಳಿವೆ. ರಾತ್ರಿ ವೇಳೆ ಸುಂದರ ವಿದ್ಯುತ್ ವ್ಯವಸ್ಥೆ ಹಾಗೂ ವರ್ಣ ರಂಜಿತ ಕಾರಂಜಿ ಕ್ಲಾಕ್ ಟವರ್‌ನ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಕಾಮಗಾರಿ ಬಳಿಕ ಸ್ಮಾರ್ಟ್ ಸಿಟಿ ನಿರ್ವಹಣೆಗೆ ಮಹಾನಗರ ಪಾಲಿಕೆಗೆ ಹಸ್ತಾಂತರಮಾಡಿತ್ತು. ಆದರೆ ಪಾಲಿಕೆ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ತೋರಿದೆ.
ಬೃಹತ್ ಗಡಿಯಾರಗಳು ವಿದ್ಯುತ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಆದರೆ ಇದರ ಬಿಲ್ ಪಾವತಿಯಾಗದ ಹಿನ್ನೆಲೆ ಕೆಲ ದಿನಗಳ ಹಿಂದೆ ಮೆಸ್ಕಾಂ ಇದರ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಇದೀಗ ಬಿಲ್ ಪಾವತಿಯಾದ ಕಾರಣ ಗಡಿಯಾರದ ಮುಳ್ಳು ಮತ್ತೆ ಸುತ್ತುವುದಕ್ಕೆ ಆರಂಭಿಸಿದೆ. ಆದರೆ ಸರಿಯಾದ ನಿರ್ವಹಣೆಯಿಲ್ಲದೆ ಕ್ಲಾಕ್ ಟವರ್ ತನ್ನ ಸೌಂದರ್ಯ ಕಳೆದುಕೊಂಡು ಸೊರಗುತ್ತಿದೆ. ಆದ್ದರಿಂದ ಆದಷ್ಟು ಶೀಘ್ರ ಪಾಲಿಕೆ ಅಧಿಕಾರಿಗಳು ಕ್ಲಾಕ್ ಟವರ್ ನಿರ್ವಹಣೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿಬೇಕಿದೆ.

ಮಹಾನಗರ ಪಾಲಿಕೆಯ ವಿರುದ್ಧ ಮಂಗಳೂರಿನ ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಹೋರಾಟಗಾರ ಜೆರಾಲ್ಡ್ ಟವರ್, "ಮಂಗಳೂರು ಮಹಾನಗರ ಪಾಲಿಕೆ ಜನರಿಗೆ ಉಪಯೋಗವಾಗುವ ಯಾವ ಕೆಲಸವನ್ನೂ ಮಾಡುತ್ತಿಲ್ಲ.ನಗರದಲ್ಲಿ ಈಗಾಗಲೇ ಹಲವು ಟಾಕ್ಸ್ ಗಳನ್ನು ಹೆಚ್ಚಳ ಮಾಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಇತರ ಸರ್ಕಾರಿ ಕಛೇರಿಗಳು ಕ್ಲಾಕ್ ಟವರ್‌ನ ಮಾರ್ಗದಲ್ಲೇ ಇರುವುದರಿಂದ ಅಧಿಕಾರಿಗಳು ಕಣ್ಮುಚ್ಚಿ ಪ್ರಯಾಣ ಮಾಡುತ್ತಿದ್ದಾರೆಯೇ" ಎಂದು ಜೆರಾಲ್ಡ್ ಟವರ್ ಪ್ರಶ್ನಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಮನಪಾ ವಿಪಕ್ಷ ನಾಯಕ ಎ.ಸಿ.ವಿನಯರಾಜ್, "ಮಹಾನಗರ ಪಾಲಿಕೆಯಲ್ಲಿ ಆಡಳಿತ ಮಾಡಲು ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳನ್ನು ನಿಯಂತ್ರಿಸಲು, ಪ್ರಶ್ನೆ ಮಾಡಲು ಆಡಳಿತ ರೂಢ ಬಿಜೆಪಿಯಿಂದ ಸಾಧ್ಯವಾಗುತ್ತಿಲ್ಲ. ಇದು ಆಡಳಿತ ವೈಫಲ್ಯ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.











Click it and Unblock the Notifications