ಮಂಗಳೂರಿನಲ್ಲಿ ಸದ್ದು ಮಾಡಿದ ಪೊಲೀಸರ ಗನ್: ನಟೋರಿಯಸ್ ರೌಡಿಶೀಟರ್ ಆಕಾಶಭವನ ಶರಣ್ ಕಾಲಿಗೆ ಗುಂಡೇಟು
ಮಂಗಳೂರು, ಜನವರಿ 10: ಮಂಗಳೂರಿನಲ್ಲಿ ಪೊಲೀಸರ ಗನ್ ಸದ್ದು ಮಾಡಿದ್ದು, ನಟೋರಿಯಸ್ ರೌಡಿಶೀಟರ್ ಆಕಾಶಭವನ ಶರಣ್ ಕಾಲಿಗೆ ಗುಂಡೇಟು ಹೊಡೆದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರದ ಜೆಪ್ಪು ಕುಡ್ಪಾಡಿಯಲ್ಲಿ ಸಾಗುತ್ತಿದ್ದಾಗ ಪೊಲೀಸರು ಆಕಾಶಭವನ ಶರಣ್‌ನನ್ನು ಬಂಧಿಸಲು ಯತ್ನಿಸಿದ್ದಾರೆ. ಈ ವೇಳೆ ರೌಡಿಶೀಟರ್ ಪೊಲೀಸರ ಮೇಲೆಯೇ ದಾಳಿಗೆ ಯತ್ನಿಸಿದ್ದು, ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ.

ಈ ಹಿಂದೆ ಜನವರಿ 5ರಂದು ರಾತ್ರಿ ಮಂಗಳೂರಿನ ಸಿಸಿಬಿ ಪೊಲೀಸರು ಕಾವೂರಿನಲ್ಲಿ ರೌಡಿಶೀಟರ್ ಆಕಾಶಭವನ ಶರಣ್‌ನನ್ನು ಬಂಧಿಸಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ಆರೋಪಿ ಪೊಲೀಸರ ಮೇಲೆಯೇ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಘಟನೆ ಬಳಿಕ ಆಕಾಶಭವನ ಶರಣ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಮಂಗಳವಾರ ಮಧ್ಯಾಹ್ನ ಶರಣ್ ಜಪ್ಪು ಕುದ್ದಾಡಿಯಲ್ಲಿದ್ದಾನೆಂದು ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದರು. ಆಗ ಈತ ತಪ್ಪಿಸಲು ಪೊಲೀಸರ ಮೇಲೆಯೇ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಸಿಸಿಬಿ ಪಿಎಸ್‌ಐ ಸುದೀಪ್ ಆರೋಪಿಯ ಮೇಲೆ ಫೈರಿಂಗ್ ಮಾಡಿದ್ದಾರೆ. ಸದ್ಯ ಗಾಯಾಳು ಆಕಾಶಭವನ ಶರಣ್‌ನನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈತನ ಮೇಲೆ ಕೊಲೆ, ಕೊಲೆಯತ್ನ, ಪೋಕ್ಸೋ ಸೇರಿದಂತೆ 21ಕ್ಕೂ ಅಧಿಕ ಪ್ರಕರಣಗಳಿದೆ.
ನಟೋರಿಯಸ್ ರೌಡಿಶೀಟರ್ ಅಕಾಶಭವನ್ ಶರಣ್ ಮೇಲೆ ಪೊಲೀಸರ ಫೈರಿಂಗ್ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, 'ಮಂಗಳೂರಿನ ಜೆಪ್ಪು ಕುಡ್ಪಾಡಿ ಬಳಿಯ ಶೂಟೌಟ್ ನಡೆದ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದು, ಬಿಳಿ ಬಣ್ಣದ ಐ10 ಕಾರಿನಲ್ಲಿ ಉಡುಪಿಯ ಮಲ್ಪೆಯಿಂದ ತಪ್ಪಿಸಿಕೊಂಡು ಶರಣ್ ಬಂದಿದ್ದ. ಮಲ್ಪೆಯಲ್ಲಿ ಸ್ನೇಹಿತನ ರೂಂನಲ್ಲಿ ಅಡಗಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಟೀಂ, ಮಲ್ಪೆಯ ರೂಂಗೆ ತೆರಳಿದ್ದ ವೇಳೆ ಕೆಲವೇ ಕ್ಷಣಗಳ ಮೊದಲು ಎಸ್ಕೇಪ್ ಆಗಿದ್ದ.
ಆಶ್ರಯ ಕೊಟ್ಟ ಸ್ನೇಹಿತನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು, ಈ ವೇಳೆ ಐ10 ಕಾರಿನಲ್ಲಿ ತೆರಳಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಹೆಜಮಾಡಿ ಟೋಲ್ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ ಶರಣ್ ಚೇಸಿಂಗ್ ಮಾಡಿದ್ದಾರೆ. ಪಂಪ್ ವೆಲ್ ಬಳಿ ಪೊಲೀಸರ ಕಣ್ಣಿಗೆ ಬಿದ್ದು ಒಂಟಿಯಾಗಿ ಕಾರು ಓಡಿಸಿಕೊಂಡು ಹೋದ ಶರಣ್‌ನನ್ನು ಚೇಸ್ ಮಾಡಿಕೊಂಡು ಹೋದ ವೇಳೆ ಜೆಪ್ಪು ಕುಡುಪಾಡಿ ರಸ್ತೆಯ ಖಾಸಗಿ ಜಾಗದಲ್ಲಿ ಶರಣ್ ಕಾರು ನಿಲ್ಲಿಸಿದ.
ಈ ವೇಳೆ ಖಾಸಗಿ ಕಾರಿನಲ್ಲಿ ಬಂದು ಶರಣ್ ಕಾರನ್ನು ಎಂಟು ಸಿಸಿಬಿ ಪೊಲೀಸರು ಸುತ್ತುವರಿದಿದ್ದಾರೆ. ಈ ವೇಳೆ ಶರಣ್ ಹಿಡಿಯಲು ಬಂದ ಕಾನ್ಸ್‌ಟೇಬಲ್ ಪ್ರಕಾಶ್ ಮೇಲೆ ಚೂರಿಯಿಂದ ಶರಣ್ ದಾಳಿ ಮಾಡಿದ್ದಾನೆ. ದಾಳಿ ಹಿನ್ನೆಲೆಯಲ್ಲಿ ಶರಣ್ ಕಾಲಿಗೆ ಪಿಎಸ್‌ಐ ಸುದೀಪ್ ಫೈರ್ ಮಾಡಿದ್ದಾರೆ' ಎಂದು ತಿಳಿಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಫಾರೆನ್ಸಿಕ್ ತಜ್ಞರಿಂದ ಪರಿಶೀಲನೆ ಮಾಡಿದ್ದು, ಸಿಸಿಬಿ ತಂಡದಿಂದ ಕಮಿಷನರ್ ಅಗರ್ವಾಲ್ ಮಾಹಿತಿ ಪಡೆದಿದ್ದಾರೆ.












Click it and Unblock the Notifications