Mangaluru Airport: ಅಕ್ಟೋಬರ್ 31ರಿಂದ ಮಂಗಳೂರು ಏರ್‌ಪೋರ್ಟ್ ಅದಾನಿ ತೆಕ್ಕೆಗೆ
ಮಂಗಳೂರು, ಅಕ್ಟೋಬರ್, 07: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ತೆಕ್ಕೆಗೆ ಸೇರಿದೆ. ಅಕ್ಟೋಬರ್ 31ರಿಂದ ಇಡೀ ಏರ್ ಪೋರ್ಟ್ ಅದಾನಿ ಗ್ರೂಪ್ ಪಾಲಾಗಲಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆಗಿನ ಒಪ್ಪಂದ ಕೊನೆಗೊಳ್ಳಲಿದೆ. ಈ ಮೂಲಕ ಪ್ರಾಧಿಕಾರದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳೂ ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ವರ್ಗಾವಣೆಯಾಗಿದ್ದಾರೆ.
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಪೂರ್ಣವಾಗಿ ಅದಾನಿ ಕೈ ಪಾಲಾಗುವ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಆದಾನಿ ಜಂಟಿ ಆಡಳಿತದ ಅವಧಿ ಅಕ್ಟೋಬರ್ 31ರಂದು ಕೊನೆಯಾಗಲಿದೆ. ಈ ಮೂಲಕ ಸರ್ಕಾರಿ ಸ್ವಾಮ್ಯದ ಉದ್ಯಮ ಈಗ ಸಂಪೂರ್ಣವಾಗಿ ಖಾಸಗಿ ಪಾಲಾಗಲಿದೆ. ವಿಮಾನ ನಿಲ್ದಾಣದ ಅಭಿವೃದ್ಧಿ ಯ ದೃಷಿಯಿಂದ ಕೇಂದ್ರ ಸರ್ಕಾರ ದೇಶದಲ್ಲಿ ಪ್ರಥಮ ಬಾರಿಗೆ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿ ಕಂಪನಿಗೆ ನೀಡಿತ್ತು.

2020ರ ಅಕ್ಟೋಬರ್ 31ರಂದು ಮಂಗಳೂರು ವಿಮಾನ ನಿಲ್ದಾಣವನ್ನು ಆದಾನಿ ಗ್ರೂಪ್‌ಗೆ ನಿರ್ವಹಣೆಗೆ ನೀಡಲಾಗಿತ್ತು. ಅದಾದ ಬಳಿಕ ಮೂರು ವರ್ಷಗಳ ಕಾಲ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಆದಾನಿ ಗ್ರೂಪ್ ಜಂಟಿ ಆಡಳಿತವನ್ನು ಮಾಡಲು ಒಪ್ಪಂದ ಮಾಡಲಾಗಿತ್ತು. ಈಗ ಒಪ್ಪಂದ ಅವಧಿ ಮುಕ್ತಾಯದ ಹಂತವನ್ನು ತಲುಪಿದ್ದು, ಕೆಲವೇ ದಿನಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗ್ರೂಪ್‌ಗೆ ಸಂಪೂರ್ಣವಾಗಿ ಸೇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಂಗಳೂರು ವಿಮಾನ ನಿಲ್ದಾಣ ದ ಬಳಿಕ ದೇಶದ 6 ವಿಮಾನ ನಿಲ್ದಾಣಗಳು ಈಗ ಆದಾನಿ ಗ್ರೂಪ್ ತೆಕ್ಕೆಗೆ ಸೇರಿದೆ. ಇನ್ನುಮುಂದೆ ಮಂಗಳೂರಿನಿಂದ ವಿಮಾನಗಳ ಓಡಾಟ ಎಲ್ಲವೂ ಅದಾನಿ ಗ್ರೂಪ್ ಮೂಲಕವೇ ನಡೆಯಲಿದೆ. ಒಪ್ಪಂದದ ಪ್ರಕಾರ ಮೂರು ವರ್ಷಗಳ ಕಾಲ ಐವತ್ತು ಪ್ರತಿಶತ ಪ್ರಾಧಿಕಾರ ಸಿಬ್ಬಂದಿ ಐವತ್ತು ಪ್ರತಿ ಶತ ಅದಾನಿ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸಬೇಕಿತ್ತು. ಇದೀಗ ಪ್ರಾಧಿಕಾರದ ಎಲ್ಲಾ ಸಿಬ್ಬಂದಿಯನ್ನು ಬೇರೆ ವಿಮಾನ ನಿಲ್ದಾಣಕ್ಕೆ ವರ್ಗಾವಣೆ ಮಾಡಿದೆ.
ಅದಾನಿ ಗ್ರೂಪ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದ್ದ 97 ಮಂದಿ ಪ್ರಾಧಿಕಾರದ ಸಿಬ್ಬಂದಿಯನ್ನು ಬೇರೆ ಕಂಪೆನಿಗಳಿಗೆ ವರ್ಗಾವಣೆ ಮಾಡಲಾಗಿದೆ. ಆದಾನಿ ಗ್ರೂಪ್ ಮಂಗಳೂರು ವಿಮಾನ ನಿಲ್ದಾಣವನ್ನು ಕೈಗೆತ್ತಿಕೊಂಡ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯವೂ ನಡೆದಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಶ್ರಾಂತಿ ಹಾಲ್, ಪ್ರವೇಶ, ನಿರ್ಗಮನ ದ್ವಾರ, ಟ್ಯಾಕ್ಸಿ ಚಾಲಕರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.
ಆದರೆ ಸರ್ಕಾರಿ ಸ್ವಾಮ್ಯದಲ್ಲಿ ವಿಮಾನ ನಿಲ್ದಾಣ ಖಾಸಗಿ ಪಾಲಾಗಿರುವುದು ಮಂಗಳೂರಿನ ಜನರಿಗೆ ಮಾತ್ರ ಬೇಸರ ತರಿಸಿದೆ. ಈ ವಿಮಾನ ನಿಲ್ದಾಣಕ್ಕಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಕೇಂದ್ರ ಸರ್ಕಾರ ಸ್ವಾಮ್ಯದಲ್ಲಿದ್ದರಿಂದ ನಮ್ಮ ಊರಿನ ಸೊತ್ತು ಎಂಬ ಭಾವವಿತ್ತು. ಮಂಗಳೂರಿಗರೇ ಸ್ಥಾಪಿಸಿದ್ದ ಬ್ಯಾಂಕ್ ಖಾಸಗಿಕರಣ ಆದಾಗಲೇ ಬೇಸರವಿತ್ತು. ಈಗ ನಮ್ಮದೆಂಬ ಹೆಮ್ಮೆಯಿದ್ದ ವಿಮಾನ ನಿಲ್ದಾಣ ಕೂಡಾ ಖಾಸಗಿ ಪಾಲಾಗಿದೆ. ಹಿರಿಯರ ಹೋರಾಟಗಳೆಲ್ಲಾ ವ್ಯರ್ಥವಾಗಿದೆ ಎಂದು ಮಂಗಳೂರಿನ ಹಿರಿಯ ನಾಗರಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆದಾನಿ ಏರ್‌ಪೋರ್ಟ್ ಎಂದು ಮರುನಾಮಕರಣ ಮಾಡಿದಾಗ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಈಗ ಇಡೀ ವಿಮಾನ ನಿಲ್ದಾಣ ಆದಾನಿ ಗ್ರೂಪ್ ಪಾಲಾದರೂ ಹೆಸರಿನಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ಲ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಹೆಸರು ಇರಲಿದೆ ಎಂದು ಆದಾನಿ ಗ್ರೂಪ್ ಸ್ಪಷ್ಟಪಡಿಸಿದೆ.












Click it and Unblock the Notifications