ಮಂಗಳೂರು : ಅಪಘಾತದಿಂದ ಹೋವರ್ ಕ್ರಾಫ್ಟ್‌ಗೆ ಹಾನಿ
ಮಂಗಳೂರು, ಜ.30 : ಕರಾವಳಿ ತಟರಕ್ಷಣಾ ಪಡೆಯ (ಕೋಸ್ಟ್‌ಗಾರ್ಡ್) ಸೇರಿದ 'ಹೋವರ್ ಕ್ರಾಫ್ಟ್-196' ವಾಹನ ಪಣಂಬೂರು ಸಮೀಪ ಅವಘಾತಕ್ಕೆ ಈಡಾಗಿದೆ. ದಿಕ್ಕುತಪ್ಪಿ ಕ್ರಾಫ್ಟ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಹೋವರ್ ಕ್ರಾಫ್ಟ್-196 ವಾಹನವನ್ನು ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಸಮುದ್ರಕ್ಕೆ ಇಳಿಸುವಾಗ ಈ ಘಟನೆ ನಡೆದಿದೆ. ಕ್ರಾಫ್ಟ್‌ಅನ್ನು ಸಮುದ್ರಕ್ಕೆ ಇಳಿಸುವಾಗ ಬಲವಾಗಿ ಗಾಳಿ ಬೀಸಿದ್ದರಿಂದ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. [ಕರಾವಳಿ ರಕ್ಷಣೆಗೆ ಬಂದ ಹೋವರ್ ಕ್ರಾಫ್ಟ್]

ಎರಡು ಹೋವರ್ ಕ್ರಾಫ್ಟ್‌ಗಳನ್ನು ಪಣಂಬೂರು ಬೀಚ್ ಬಳಿಯ ಟವರ್ ಒಂದರ ಬಳಿ ನೆಲದ ಮೇಲೆ ನಿಲ್ಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಈ ಹೋವರ್ ಕ್ರಾಫ್ಟ್‌ಗಳನ್ನು ಕರಾವಳಿ ತಟರಕ್ಷಣಾ ಪಡೆಗೆ ಸಮರ್ಪಿಸಲಾಗಿತ್ತು. ರಾಜ್ಯಪಾಲ ವಜುಭಾಯಿ ವಾಲಾ ಇವುಗಳನ್ನು ಲೋಕಾರ್ಪಣೆ ಮಾಡಿದ್ದರು. ಸದ್ಯ ಒಂದು ಕ್ರಾಫ್ಟ್ ಹಾನಿಗೀಡಾಗಿದೆ. [ಪಣಂಬೂರು ಕಡಲ ತೀರಕ್ಕೆ ಬಂತು ಹೋವರ್ ಕ್ರಾಫ್ಟ್]
ಘಟನೆ ನಡೆದ ಬಗ್ಗೆ ವರದಿ ಮಾಡದಂತೆ ಪತ್ರಕರ್ತರಿಗೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ಹೋವರ್ ಕ್ರಾಫ್ಟ್ ನೋಡಲು ಬಂದ ಜನರನ್ನು ದೂರು ಕಳಿಸಿದ್ದಾರೆ. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಹೋವರ್ ಕ್ರಾಫ್ಟ್-196 ನೀರು ಮತ್ತು ನೆಲದ ಮೇಲೆ ಸಂಚರಿಸುವ ಸಾಮರ್ಥ್ಯ ಹೊಂದಿದೆ. ವಿದೇಶಿ ನಿರ್ಮಿತವಾಗಿರುವ ಇದರ ಮೌಲ್ಯ ಸುಮಾರು 60 ಕೋಟಿ. ಅಪಘಾತದಿಂದಾಗಿ ಕ್ರಾಫ್ಟ್‌ನ ಬೆಲೂನ್‌ನಂಥ ಭಾಗಕ್ಕೆ ಹಾನಿಯಾಗಿದ್ದು ಲಕ್ಷಾಂತರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.











Click it and Unblock the Notifications