ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ವರ್ಗಾವಣೆ
ಮಂಗಳೂರು ಅಗಸ್ಟ್ 2: ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದ್ದು ಅವರ ಜಾಗಕ್ಕೆ ರಾಜ್ಯ ಗುಪ್ತಚರ ವಿಭಾಗದ ಡಿಐಜಿ ಡಾ. ಸುಬ್ರಹ್ಮಣ್ಯೇಶ್ವರ್ ರಾವ್ ಅವರನ್ನು ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ನಿಯುಕ್ತಿಗೊಳಿಸಿದೆ.
ಹಾಲಿ ಮಂಗಳೂರು ಪೊಲೀಸ್ ಕಮಿಷನರ್ ಆಗಿರುವ ಸಂದೀಪ್ ಪಾಟೀಲ್ ಅವರನ್ನು ಬೆಂಗಳೂರು ನಗರದ ಜಂಟಿ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಾ. ಸುಬ್ರಹ್ಮಣ್ಯೇಶ್ವರ್ ರಾವ್ ಕರ್ತವ್ಯ ನಿರ್ವಹಿಸದ ಅನುಭವ ಹೊಂದಿದ್ದಾರೆ. ಅವರು ಪುತ್ತೂರು ಎಎಸ್ ಪಿಯಾಗಿ ಕರ್ತವ್ಯ ಆರಂಭಿಸಿದ್ದರು, ನಂತರ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ . ಮೈಸೂರು ನಗರ ಪೊಲೀಸ್ ಆಯುಕ್ತರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಮಂಗಳೂರು ಪೊಲೀಸರು ಬಿರುಸುಗೊಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ಪಾಟೀಲ್ ನಿನ್ನೆಯಷ್ಟೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ತನಿಖೆಯ ಮಾಹಿತಿ ಕಲೆಹಾಕಿದ್ದರು. ಬೆಂಗಳೂರಿಗೂ ಪೊಲೀಸ್ ತಂಡಗಳನ್ನು ಕಳುಹಿಸಿ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಈ ಪ್ರಕರಣದ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದೆಂದು ಸಂದೀಪ್ ತಿಳಿಸಿದ್ದರು.

ಸಿದ್ಧಾರ್ಥ್ ಪ್ರಕರಣದ ತನಿಖೆ ಬಿರುಸುಗೊಂಡಿರುವ ಬೆನ್ನಲ್ಲೇ ಸಂದೀಪ್ ಪಾಟೀಲ್ ಅವರನ್ನು ನೂತನ ರಾಜ್ಯ ಸರಕಾರ ವರ್ಗಾವಣೆಗೊಳಿಸಿದೆ. ತನಿಖೆ ಪ್ರಗತಿಯಲ್ಲಿರುವ ಸಂದರ್ಭದಲ್ಲಿ ಈ ವರ್ಗಾವಣೆ ಬೇಕಿತ್ತಾ? ಎನ್ನುವ ಪ್ರಶ್ನೆ ಮೂಡಿದೆ.












Click it and Unblock the Notifications