ಶೀಘ್ರದಲ್ಲೇ ಮಂಗಳೂರು-ಬೆಂಗಳೂರು ಕುಡ್ಲ ಎಕ್ಸ್‌ಪ್ರೆಸ್
ಮಂಗಳೂರು, ಜು. 28 : ಮಂಗಳೂರು-ಬೆಂಗಳೂರು ನಡುವೆ ಹಗಲು ರೈಲು ಕುಡ್ಲ ಎಕ್ಸ್ ಪ್ರೆಸ್ ಶೀಘ್ರವೇ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ರಾಜ್ಯದಲ್ಲಿನ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಯಾವುದೇ ಹೊಸ ಅನುದಾನ ನಿರೀಕ್ಷಿಸುತ್ತಿಲ್ಲ. ಹಿಂದೆ ನೀಡುತ್ತಿದ್ದ ಶೇ 50 ರಷ್ಟು ಅನುದಾನ ಮುಂದುವರೆಸುವಂತೆ ಕೇಳಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಭಾನುವಾರ ತಾಯಿಯ ಆರೋಗ್ಯ ವಿಚಾರಿಸಲು ಹುಟ್ಟೂರು ಸುಳ್ಯ ಸಮೀಪದ ಮಂಡೆಕೋಲು ಗ್ರಾಮದ ದೇವರಗುಂಡ ಮನೆಗೆ ಆಗಮಿಸಿದ್ದ ಸದಾನಂದ ಗೌಡರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ರೈಲ್ವೆ ಬಜೆಟ್ ನಲ್ಲಿ ಘೋಷಿಸಿರುವಂತೆ ಮಂಗಳೂರು-ಬೆಂಗಳೂರು ಮಧ್ಯೆ ಹಗಲು ರೈಲು 'ಕುಡ್ಲ ಎಕ್ಸ್ ಪ್ರೆಸ್' ಶೀಘ್ರವೇ ಆರಂಭವಾಗಲಿದೆ ಎಂದು ತಿಳಿಸಿದರು.

ಜು.31ರಂದು ನವ ದೆಹಲಿಯಲ್ಲಿ ನಡೆಯುವ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಬಜೆಟ್ ಯೋಜನೆ ಅನುಷ್ಠಾನ ಬಗ್ಗೆ ಚರ್ಚೆ ನಡೆಸಲಾಗುವುದು. ರೈಲ್ವೆ ಇಲಾಖೆಯ ವಿವಿಧ ವಿಭಾಗಗಳ ವ್ಯವಸ್ಥಾಪಕ ನಿರ್ದೇಶಕರು, ಸುರಕ್ಷಾ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಸಚಿವರು ಹೇಳಿದರು. [ರೈಲು ಯೋಜನೆಗಳಿಗೆ ಹಣ ನೀಡಲು ಸಿದ್ಧ]
ಈ ಬಾರಿ ರೈಲ್ವೆ ಬಜೆಟ್ ಅನ್ನು ವಿರೋಧಿಗಳೂ ಮೆಚ್ಚಿದ್ದಾರೆ. ರೈಲ್ವೆ ಬಜೆಟ್ ಮಂಡನೆಗೆ ಮುನ್ನ ಅದನ್ನು ಪ್ರಧಾನಿಗೆ ಒಪ್ಪಿಸಿದ್ದು, ಅವರು ಕೆಲವು ಮಾರ್ಪಾಡುಗಳನ್ನು ಮಾಡುವಂತೆ ಸೂಚನೆ ನೀಡಿದ್ದರು. ರೈಲ್ವೆ ಬಜೆಟ್ ಅನುಷ್ಠಾನದ ಕುರಿತು ಶೀಘ್ರವೇ ಗಮನಹರಿಸಲಾಗುವುದು ಎಂದರು. [ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]
ರಾಜ್ಯ ಸರ್ಕಾರ ಸಹಕಾರ ನೀಡಲಿ : ಕರ್ನಾಟಕದಲ್ಲಿನ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ ಯಾವುದೇ ಹೊಸ ಅನುದಾನವನ್ನು ಕೇಂದ್ರ ನಿರೀಕ್ಷಿಸುತ್ತಿಲ್ಲ. ಬದಲಿಗೆ ಹಿಂದೆ ನೀಡುತ್ತಿದ್ದ ಅನುದಾನ ಮುಂದುವರಿಸುವಂತೆ ಕೇಳಿಕೊಳ್ಳಲಾಗಿದೆ ಎಂದರು.
ಹೊಸ ಯೋಜನೆ ಘೋಷಣೆ ಮಾಡುವ ಬದಲು ಹಿಂದೆ ಘೋಷಿಸಿರುವ ಇರುವ ಯೋಜನೆಯನ್ನೇ ಸುಧಾರಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ರೈಲ್ವೆ ಸುಧಾರಣೆಗೆ ರಾಜ್ಯ ಸರ್ಕಾರ ಶೇ.50ರಷ್ಟು ಅನುದಾನ ನೀಡಬೇಕು ಹಾಗೂ ಅವಶ್ಯಕ ಜಮೀನು ಮಂಜೂರು ಮಾಡಬೇಕು ಎಂಬ ನಿಯಮವಿದೆ ಎಂದು ತಿಳಿಸಿದರು.












Click it and Unblock the Notifications