ದನ ಉಳಿಸಲು ಹೋಗಿ ಜೀವ ಕಳೆದುಕೊಂಡ
ಮಂಗಳೂರು, ಜು. 7 : ಬೈಕಿಗೆ ಅಡ್ಡ ಬಂದ ದನವನ್ನು ಉಳಿಸಲು ಹೋದ ಸವಾರ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಬಜ್ಪೆಯಲ್ಲಿ ನಡೆದಿದೆ. ದನಕ್ಕೆ ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಂದರ್ಭದಲ್ಲಿ ಬೈಕ್ ನಿಂದ ಕೆಳಗೆ ಬಿದ್ದ ಸವಾರ ರಸ್ತೆಯ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲೋಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೊಗ್ರು ಹೊಸಮನೆಯ ನಿವಾಸಿ ಭಾಸ್ಕರ್ ಆಳ್ವ (38) ಎಂದು ಗುರುತಿಸಲಾಗಿದೆ. ಭಾನುವಾರ ಮುಂಜಾನೆ ಈ ಅಪಘಾತ ಸಂಭವಿಸಿದ್ದು, ಭಾಸ್ಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭಾಸ್ಕರ್ ಬೈಕ್ ನಲ್ಲಿ ಆಗಮಿಸುವ ಸಂರ್ಭದಲ್ಲಿ ರಸ್ತೆಗೆ ಅಡ್ಡಲಾಗಿ ದನವೊಂದು ಬಂದಿದೆ. ಅದಕ್ಕೆ ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿದೆ. ತಕ್ಷಣ ಭಾಸ್ಕರ್ ಬೈಕಿನಿಂದ ಕೆಳಗೆ ಬಿದ್ದಿದ್ದಾರೆ. ಅವರ ತಲೆಯು ರಸ್ತೆಗೆ ಅಪ್ಪಳಿಸಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದರು.
ಉಡುಪಿ ವೃದ್ಧನ ರಕ್ಷಣೆ : ರಾಷ್ಟ್ರೀಯ ಮಾನವ ಹಕ್ಕುಗಳ ಉಡುಪಿ ಜಿಲ್ಲಾ ಘಟಕದ ಸದಸ್ಯರು ಶೆಡ್ ವೊಂದರಲ್ಲಿ ಅನಾಥವಾಗಿ ಬದುಕು ಸಾಗಿಸುತ್ತಿದ್ದ 85 ವರ್ಷದ ವೃದ್ಧನನ್ನು ರಕ್ಷಿಸಿದ್ದಾರೆ. ಮೂರು ಮಕ್ಕಳ ತಂದೆಯಾಗಿರುವ ಸುರೇಂದ್ರ ನಾಯಕ್ ಅವರನ್ನು ಮಕ್ಕಳು ಮನೆಯಿಂದ ಹೊರಹಾಕಿದ್ದರು.

ಹಲವು ದಿನಗಳಿಂದ ಉಡುಪಿ ನಗರದ ಶೆಡ್ ವೊಂದರಲ್ಲಿ ಸುರೇಂದ್ರ ನಾಯಕ್ ವಾಸಿಸುತ್ತಿದ್ದರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಸದಸ್ಯರು ಭಾನುವಾರ ಅವರನ್ನು ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.












Click it and Unblock the Notifications