ಮಳಲಿ ಮಸೀದಿ ವಿವಾದ ಪ್ರಕರಣ; ಮಂಗಳೂರು ಕೋರ್ಟ್‌ನಲ್ಲಿ ಇಂದು ತೀರ್ಪು ಸಾಧ್ಯತೆ
ಮಂಗಳೂರು, ಅಕ್ಟೋಬರ್, 17; ವಿವಾದದ ಕಿಡಿ ಹೊತ್ತಿಸಿದ್ದ ಮಳಲಿ ಮಸೀದಿ ವಿಚಾರವಾಗಿ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ ಅಕ್ಟೊಂಬರ್ 17 ಇಂದು ಅರ್ಜಿಯ ತೀರ್ಪು ಹೊರಬರುವ ಸಾಧ್ಯತೆಗಳಿವೆ. ಕೋರ್ಟ್ ಮೂಲಕ ವಿಶ್ವ ಹಿಂದೂ ಪರಿಷತ್ ಮಸೀದಿ ಕಾಮಗಾರಿ ತಡೆಯಾಜ್ಞೆಯನ್ನು ಮಾಡಿದ್ದು, ಬಳಿಕ ಕೋರ್ಟ್ ಕಮಿಷನರ್ ಮೂಲಕ ಮಸೀದಿ ಸರ್ವೇಗೆ ಅರ್ಜಿ ಹಾಕಿತ್ತು. ವಿಶ್ವ ಹಿಂದೂ ಪರಿಷತ್ ಹಾಕಿದ್ದ ಈ ಅರ್ಜಿಯ ಬಗ್ಗೆ ಇಂದು ನ್ಯಾಯಾಲಯದ ತೀರ್ಪು ಹೊರಬರುವ ಸಾಧ್ಯತೆಗಳಿವೆ. ಸಂಜೆ ನಾಲ್ಕು ಗಂಟೆಯ ವೇಳೆಗೆ ತೀರ್ಪು ಪ್ರಕಟವಾಗುವ ಸಾಧ್ಯತೆಗಳಿವೆ.
ಮಳಲಿ ಮಸೀದಿ ವಿವಾದದ ತೀರ್ಪು
2022ರ ಏಪ್ರಿಲ್‌ನಲ್ಲಿ ಮಳಲಿ ಮಸೀದಿ ನವೀಕರಣದ ವೇಳೆ ಕಟ್ಟಡ ಕೆಡವಿದ ಸಂದರ್ಭ ಹಿಂದೂ ಶೈಲಿಯ ಮರದ ಕೆತ್ತನೆ ಪತ್ತೆ ಆಗಿತ್ತು. ಹಿಂದೂ ಶೈಲಿಯ ಮರದ ಕೆತ್ತನೆಯ ಮಸೀದಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ರಾಷ್ಟ್ರ ಮಟ್ಟದವರೆಗೂ ಈ ಸುದ್ದಿ ಹಬ್ಬಿತ್ತು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ಹಿಂದೂ ಸಂಘಟನೆಗಳು ಮಧ್ಯ ಪ್ರವೇಶಿಸಿ ಮಸೀದಿ ಇರುವ ಸ್ಥಳದ ಬಗ್ಗೆ ತಾಂಬೂಲ ಪ್ರಶ್ನಾ ಚಿಂತನೆಯನ್ನು ಇರಿಸಿತ್ತು. ತಾಂಬೂಲ ಪ್ರಶ್ನೆಯಲ್ಲಿ ಮಸೀದಿಯಲ್ಲಿ ಈ ಹಿಂದೆ ಗುರುಸಾನಿಧ್ಯ ಇದ್ದ ಬಗ್ಗೆ ಗೋಚರವಾಗಿತ್ತು ಹೇಳಲಾಗಿತ್ತು.

ಕೋರ್ಟ್ ಮೆಟ್ಟಿಲೇರಿದ್ದ ಹಿಂದೂ ಸಂಘಟನೆಗಳು
ಬಳಿಕ ಈ ವಿಚಾರದಲ್ಲಿ ವಿಎಚ್‌ಪಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿತ್ತು. 2022ರ ಮೇ ತಿಂಗಳಿನಿಂದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಮಳಲಿ ಮಸೀದಿ ವಿಚಾರದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ತೀರ್ಪು ಸೆಪ್ಟೆಂಬರ್ 27ರಂದು ಹೊರಬೀಳಬೇಕಿತ್ತು. ಆದರೆ ಅಕ್ಟೋಬರ್ 17ಕ್ಕೆ ತೀರ್ಪು ಅನ್ನು ಕೋರ್ಟ್ ಮುಂದೂಡಿತ್ತು. ಹಾಗಾಗಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಳಲಿ ಮಸೀದಿಯ ತೀರ್ಪು ಸಂಜೆ 4 ಗಂಟೆ ವೇಳೆಗೆ ಹೊರಬೀಳಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.