ಮಕರ ಸಂಕ್ರಮಣದ ದಿನ ಪುತ್ತೂರಲ್ಲಿ ಮಹಾಲಿಂಗೇಶ್ವರನಿಗೆ ನಡೆಯುತ್ತದೆ ಈ ಅಪೂರ್ವ ಸೇವೆ
ಮಂಗಳೂರು, ಜನವರಿ 15: ಆಚರಣೆಯಲ್ಲಿ ಅತ್ಯಂತ ವಿಶೇಷತೆಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಒಂದಾದ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಕನಕಾಭಿಷೇಕಕ್ಕೆ ಅತ್ಯಂತ ಮಹತ್ವವಿದೆ.
ಮಕರ ಸಂಕ್ರಮಣದ ಶುಭದಿನದಂದು ಮಹಾಲಿಂಗೇಶ್ವರ ಸ್ಚಾಮಿಯ ಉತ್ಸವಮೂರ್ತಿಗೆ ನೆರವೇರುವ ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸುತ್ತಾರೆ.

ರಾಜ್ಯದ ಬೇರೆ ಯಾವುದೇ ಕ್ಷೇತ್ರದಲ್ಲಿ ಆಚರಣೆಯಲ್ಲಿದ ಈ ಆಚರಣೆಯ ಹಿಂದ ರೋಚಕ ಕಥೆಯೂ ಇದೆ. ಹಿಂದೆ ಅಣ್ಣಪ್ಪ ದೈವವು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಇಲ್ಲಿ ಪೂಜಿಸಲ್ಪಡುತ್ತಿದ್ದ ಶಿವಲಿಂಗವನ್ನು ಕೊಂಡೊಯ್ಯಲು ಯತ್ನಿಸಿತ್ತಂತೆ. ಆ ಸಂದರ್ಭದಲ್ಲಿ ಅಣ್ಣಪ್ಪ ದೈವವನ್ನು ತಡೆದ ಕ್ಷೇತ್ರದ ರಕ್ಷಣೆಯ ಹೊಣೆ ಹೊತ್ತಿದ್ದ ಉಳ್ಳಾಲ್ತಿ, ಉಳ್ಲಾಕುಲು, ಅಂಗಣತ್ತಾಯ, ರಕ್ತೇಶ್ವರಿ ಮೊದಲಾದ ದೈವಗಳು ಅಣ್ಣಪ್ಪ ದೈವವನ್ನು ತಡೆದು ಶಿವಲಿಂಗವನ್ನು ಕೊಂಡೊಯ್ಯದಂತೆ ತಡೆದಿದ್ದವು.
ಇದರಿಂದಾಗಿ ಅಣ್ಣಪ್ಪ ದೈವ ಶಿವಲಿಂಗವಿಲ್ಲದೆ ಬರಿಗೈಯಲ್ಲೇ ಹಿಂದಿರುಗಬೇಕಾಯಿತು. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿಕ ಅಣ್ಣಪ್ಪ ದೈವ ಕದ್ರಿ ಮಂಜುನಾಥೇಶ್ವರ ದೇವಳದಿಂದ ಶಿವಲಿಂಗವನ್ನು ಧರ್ಮಸ್ಥಳಕ್ಕೆ ಕೊಂಡೊಯ್ದ ಎನ್ನುವ ಮಾಹಿತಿ ಪುರಾಣ ಕಥೆಗಳಲ್ಲಿದೆ.
ಮರಕ ಸಂಕ್ರಮಣದ ದಿನ ಈ ಕಥೆ ನಡೆದಿದ್ದು, ದೈವಗಳ ವಿರುದ್ಧ ದೈವಗಳ ವಿಜಯದ ಸಂಕೇತವಾಗಿ ಈ ಕನಕಾಭಿಷೇಕ ಮಹಾಲಿಂಗೇಶ್ವರ ಸ್ವಾಮಿಗೆ ನಡೆಯುತ್ತದೆ. ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ದೈವಗಳು ತಮ್ಮ ವಿಜಯವನ್ನು ದೇವರಿಗೆ ಕನಕಾಭಿಷೇಕ ಮಾಡುವ ಮೂಲಕ ವಿಜ್ರಂಭಿಸಿದ ದ್ಯೋತಕವಾಗಿ ಈ ಆಚರಣೆ ಹಿಂದಿನಿಂದಲೇ ನಡೆದುಕೊಂಡು ಬರುತ್ತಿದೆ.
ಕನಕಾಭಿಷೇಕದಲ್ಲಿ ಹೊದ್ಲು, ವೀಳ್ಯದೆಲೆ, ಅಡಿಕೆ , ಕಾಳುಮೆಣಸು, ಬೆಳ್ಳಿ, ಚಿನ್ನ ಇವುಗಳ ಸಮ್ಮಿಶ್ರಣವನ್ನು ದೊಡ್ಡ ಹರಿವಾಣದಲ್ಲಿ ಹಾಕಿ ಅದನ್ನು ಉತ್ಸವ ಮೂರ್ತಿಗೆ ಹಾರಿಸುವುದಕ್ಕೆ ಕನಕಾಭಿಷೇಕ ಎನ್ನುತ್ತಾರೆ. ದೇವರ ಉತ್ಸವಮೂರ್ತಿಯ ಉಡಿಕೆ ಸುತ್ತು, ಚೆಂಡೆಸುತ್ತು, ವಾಲಗ ಸುತ್ತಿನ ಬಳಿಕ ಪಲ್ಲಕ್ಕಿ ಉತ್ಸವದ ಬಳಿಕ ಉಳ್ಳಾಲ್ತಿ ದೈವದ ನಡೆಯ ಪಕ್ಕದಲ್ಲಿ ಕನಕಾಭಿಷೇಕ ನಡೆಯುತ್ತದೆ. ದೇವರಿಗೆ ನಡೆಯುವ ಈ ಸೇವೆಯನ್ನು ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಕ್ಷೇತ್ರದಲ್ಲಿ ಸೇರುತ್ತಾರೆ.












Click it and Unblock the Notifications