ಕುಕ್ಕೆ ಸುಬ್ರಮಣ್ಯ : ಅಪಘಾತ, ಗದಗ ಮೂಲದ ಇಬ್ಬರ ಸಾವು
ಮಂಗಳೂರು, ಜ. 23 : ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಪ್ರಕರಣ ನಡೆದಿದೆ. ಮೃತರನ್ನು ಗದಗ ಮೂಲದವರು ಎಂದು ಗುರುತಿಸಲಾಗಿದೆ.
ಮೃತಪಟ್ಟವರನ್ನು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಿಜ್ಜೂರು ಗ್ರಾಮದ ನಿವಾಸಿ ಹುಸೇನ್ ಸಾಬ್ ಅವರ ಪುತ್ರ ಚಾಂದ್ ಸಾಬ್(35) ಹಾಗೂ ಶಿರಹಟ್ಟಿ ತಾಲೂಕಿನ ಸುಗೆನಹಳ್ಳಿ ಗ್ರಾಮದ ಹಿರೇಮಠ ದಿ. ಚೆನ್ನವೀರಯ್ಯ ಎಂಬವರ ಪುತ್ರ ಶಿವಯ್ಯ (30) ಎಂದು ಗುರುತಿಸಲಾಗಿದೆ.

ಶಿವಯ್ಯ ಕುಕ್ಕೆ ಸುಬ್ರಮಣ್ಯದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಚಾಂದ್ ಸಾಬ್ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದರು. ಗುರುವಾರ ಮುಂಜಾನೆ ಅವರು ಊರಿಗೆ ತೆರಳಲು ಸಾಗುತ್ತಿದ್ದಾಗ ಇನ್ನೋವಾ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಚಾಂದ್ ಸಾಬ್ ಅವರನ್ನು ಊರಿಗೆ ಕಳಿಸಲು ಶಿವಯ್ಯ ಅವರು ಸುಬ್ರಹ್ಮಣ್ಯದಿಂದ ನೆಟ್ಟಣ ರೈಲ್ವೆ ಸ್ಟೇಷನ್‌ಗೆ ಮುಂಜಾನೆ ಹೊರಟಿದ್ದರು. ಸುಮಾರು 5.40ರ ಹೊತ್ತಿಗೆ ಬೆಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕ ದೇವರಾಜ್ ಅವರನ್ನು ಬಂಧಿಸಿದ್ದಾರೆ. ಶವಗಳ ಮರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications