ಜ.31ರಂದು ಕುಕ್ಕೆಯಲ್ಲಿ ಸಾಮೂಹಿಕ ವಿವಾಹ: ಅರ್ಜಿ ಸಲ್ಲಿಕೆ, ಸಿಗುವ ಸೌಲಭ್ಯದ ವಿವರ
ಮಂಗಳೂರು, ನವೆಂಬರ್ 27: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುಂದಿನ ವರ್ಷ 2024ರ ಜನವರಿ 31ರಂದು ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ನಡೆಯಲಿದೆ. ಈ ಕಾರ್ಯಕ್ರಮದಡಿಯಲ್ಲಿ ನವ ಜೀವನಕ್ಕೆ ಕಾಲಿಡಲು ಬಯಸುವ ನವ ವಧು-ವರರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
2024ರ ಜನವರಿ 31ರಂದು ಬೆಳಗ್ಗೆ 11.20ರಿಂದ 12.20ರ ವರೆಗೆ ನೆರವೇರುವ ಅಭಿಜಿನ್ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಹೀಗಾಗಿ ಆಸಕ್ತರು ನಿಗದಿತ ದಾಖಲೆಗಳೊಂದಿಗೆ ಡಿಸೆಂಬರ್ 31ರಂದು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 31ರಂದು ವಿವಾಹ ನಡೆಯಲಿದ್ದು, ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿಗಳನ್ನು ಸ್ವೀಕರಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಜನವರಿ 5ರಂದು ನೋಂದಾಯಿತ ವಧು-ವರರ ವಿವರಗಳನ್ನು ದೇವಸ್ಥಾನದಲ್ಲಿ ಪ್ರಕಟಿಸಲಿದೆ. ಇನ್ನು ವಧು-ವರರ ಪಟ್ಟಿಯ ಬಗ್ಗೆ ಅಕ್ಷೇಪಣೆ ಇದ್ದರೆ ಜನವರಿ 10ರವೊಳಗೆ ಸಲ್ಲಿಸಬಹುದಾಗಿದೆ. ಅಕ್ಷೇಪಣೆಗಳ ಪರಿಶೀಲನೆ ಬಳಿಕ ಜನವರಿ15 ರಂದು ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುವ ವಧು-ವರರ ಅಂತಿಮ ಪಟ್ಟಿ ಪ್ರಕಟವಾಗಲಿದೆ.
ಸಾಮೂಹಿಕ ವಿವಾಹದ ನಿಯಮಗಳ ಬಗ್ಗೆ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಯಾವುದೇ ಗೊಂದಲಳಿದ್ದಲ್ಲಿ 08257-281224ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಅಥವಾ ಖುದ್ದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.

ಸಾಮೂಹಿಕ ವಿವಾಹದಲ್ಲಿ ವಧು-ವರರಿಗೆ ಸಹಾಯ ಹಸ್ತ
2024ರ ಜನವರಿ 31ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹದಲ್ಲಿ ವರನಿಗೆ ದೇವಸ್ಥಾನದ ವತಿಯಿಂದ ಹೂವಿನ ಹಾರ, ಪಂಚೆ, ಶಲ್ಯ, ಶರ್ಟ್, ಪೇಟ, ಬಾಸಿಂಗಕ್ಕಾಗಿ ಪ್ರೋತ್ಸಾಹ ಧನವಾಗಿ 5 ಸಾವಿರ ರೂಪಾಯಿ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣ, ಕಾಲುಂಗುರ ಇತ್ಯಾದಿಗಳಿಗೆ 10 ಸಾವಿರ ರೂಪಾಯಿ ನೀಡಲಾಗುತ್ತದೆ.
40 ಸಾವಿರ ರೂಪಾಯಿ ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ, 2 ಚಿನ್ನದ ಗುಂಡನ್ನು ನೀಡಲಾಗುತ್ತದೆ. ವಧು-ವರರು ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಗಳನ್ನು ದೇವಾಲಯದಲ್ಲೇ ಮಾಡಲಾಗುತ್ತದೆ. ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ 10 ಸಾವಿರ ರೂಪಾಯಿನಿಶ್ಚಿತ ಠೇವಣಿ ಒದಗಿಸಲಾಗುವುದು. ವಿವಾಹವಾಗುವ ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ 50 ಸಾವಿರ ರೂಪಾಯಿ ಕೂಡ ಸಿಗಲಿದೆ.
ಸಾಮೂಹಿಕ ವಿವಾಹಕ್ಕೆ ವಧು-ವರರು ನೀಡಬೇಕಾದ ದಾಖಲೆ
ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಬಯಸುವ ವಧು-ವರರು ಪೂರ್ಣ ವಿಳಾಸ ದೊಂದಿಗೆ ಜನನ ದಿನಾಂಕವನ್ನು ದೃಢೀಕರಿಸುವ ಶಾಲಾ ದೃಢಪತ್ರದ ಪ್ರತಿ, ಪಾಸ್‌ಪೋರ್ಟ್ ಗಾತ್ರದ 2 ಫೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಧು-ವರರ ಬ್ಯಾಂಕ್ ಖಾತೆ ಸಂಖ್ಯೆಯ ದಾಖಲೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯತ್‌ನಿಂದ ಅಥವಾ ಸಂಬಂಧಪಟ್ಟ ಸರಕಾರಿ ಇಲಾಖಾಧಿಕಾರಿಗಳಿಂದ ದೃಢಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications