ಮಂಗಳೂರು ಪುರಾಣ ಪ್ರಸಿದ್ದ ದೇವಾಲಯದ ಅರ್ಚಕರಾಗಿ ವಿಧವೆಯರು
ಮಂಗಳೂರು, ಅ 4: ಸದಾ ಸುದ್ದಿಯಲ್ಲಿರುವ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಗೆ ಮುಂದಾಗಿದ್ದಾರೆ. ಬಿಲ್ಲವ ಸಮಾಜದವರು ಹೆಚ್ಚಾಗಿ ಪೂಜಿಸಲ್ಪಡುವ ನಗರದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಅರ್ಚಕರಾಗಿ ಇಬ್ಬರು ವಿಧವೆಯರನ್ನು ನೇಮಿಸಿದ್ದಾರೆ.
ಬಿಲ್ಲವ ಸಮಾಜದ ಗುರು ಬ್ರಹ್ಮಶ್ರೀ ನಾರಾಯಣ ಗುರು 1912ರಲ್ಲಿ ಈ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದರು. ನಾಳೆಯಿಂದ (ಅ 5) ಆರಂಭವಾಗಲಿರುವ ಶರವನ್ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇಬ್ಬರು ವಿಧವೆಯವರು ಗರ್ಭಗುಡಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ ಎಂದು ಜನಾರ್ಧನ ಪೂಜಾರಿ ಹೇಳಿದ್ದಾರೆ.
ಅಕ್ಟೋಬರ್ ಆರರಂದು ಮೆರವಣಿಗೆ ಮೂಲಕ ಇಬ್ಬರು ಮಹಿಳೆಯರನ್ನು ಕರೆತರಲಾಗುತ್ತದೆ. ಅವರು ಶಿವನ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಿ ನಂತರ ಅನ್ನಪೂರ್ಣೇಶ್ವರಿ ಗುಡಿಗೆ ಪ್ರವೇಶ ಮಾಡಿ ಅಲ್ಲಿ ಪೂಜೆ ಸಲ್ಲಿಸಿ ತದನಂತರ ಅಶ್ವತ್ಥ ಮರದ ಕೆಳಗೆ ಸ್ಥಾಪಿಸಲಾಗುವ ದತ್ತಾತ್ರೇಯ ಮೂರ್ತಿಯನ್ನು ಉದ್ಘಾಟಿಸಲಿದ್ದಾರೆಂದು ಪೂಜಾರಿ ಹೇಳಿದ್ದಾರೆ.
ನಮ್ಮ ಸಮಾಜದ ಗುರುಗಳಾದ ಶ್ರೀನಾರಾಯಣಗುರುಗಳು ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವವನ್ನು ಪ್ರತಿಪಾದಿಸಿದ್ದರು. ನಮ್ಮ ಕ್ಷೇತ್ರಕ್ಕೆ ಸೂತಕ ಎನ್ನುವುದೇ ಇಲ್ಲ. ಮಹಿಳೆಯರು ವರ್ಷವಿಡೀ ಇಲ್ಲಿಗೆ ಬಂದು ಪೂಜೆ ಸಲ್ಲಿಸ ಬಹುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳಾ ಅರ್ಚಕರನ್ನು ತಯಾರು ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಜನಾರ್ಧನ ಪೂಜಾರಿ ಪತ್ರಿಕಾಘೋಷ್ಠಿಯಲ್ಲಿ ಹೇಳಿದ್ದಾರೆ.
ವಿಧವೆಯರು ಅರ್ಚಕರಾಗ ಬಾರದೇ? ಜನಾರ್ಧನ ಪೂಜಾರಿಯವರ ಈ ಕ್ರಾಂತಿಕಾರಿ ಹೆಜ್ಜೆಗೆ ಓದುಗರೇ ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.
ವಿಧವೆಯರು ಅಮಂಗಲ್ಯರಲ್ಲ.. ಮುಂದೆ ಓದಿ

ಮಹಿಳೆಯರಿಗೆ ಗೌರವ
ದೇವರಿಗೆ ಲಿಂಗಭೇದವಿಲ್ಲ. ಮಹಿಳೆಯರಿಗೂ ದೇವರನ್ನು ಪೂಜಿಸುವ ಹಕ್ಕಿದೆ. ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರ ನಡುವೆ ಸಮಾನತೆ ಇರಬೇಕು. ಈ ಸದುದ್ದೇಶಕ್ಕಾಗಿ ಈ ಬಾರಿಯ ನವರಾತ್ರಿ ಉತ್ಸವದ ಸಮಯದಲ್ಲಿ ಇಬ್ಬರು ವಿಧವೆಯರನ್ನು ಅರ್ಚಕರಾಗಿ ನೇಮಿಸುತ್ತಿದ್ದೇವೆ. ಇವರು ಶಾಶ್ವತವಾಗಿ ಮುಂದಿನ ದಿನಗಳಲ್ಲಿ ಇಲ್ಲಿ ಪೂಜೆ ಸಲ್ಲಿಸಲಿದ್ದಾರೆ - ಜನಾರ್ಧನ ಪೂಜಾರಿ.

ಬ್ರಹ್ಮಶ್ರೀ ನಾರಾಯಣ ಗುರು
ಸಮಾಜ ಸುಧಾರಕ ಬ್ರಹ್ಮ ಶ್ರೀ ನಾರಾಯಣಗುರುಗಳು ಸ್ಥಾಪಿಸಿದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ವಿಧವೆಯರ ಕಣ್ಣೀರು ಒರೆಸಲು ಮುಂದಾಗಿದೆ. ಗಂಡನನ್ನು ಕಳೆದುಕೊಂಡ ಮಹಿಳೆಯ ಬಗ್ಗೆ ಸಮಾಜದಲ್ಲಿರುವ ನಿಷೇಧಾತ್ಮಕ ಚಿಂತನೆ ನಿವಾರಿಸಲು ಕಾರ್ಯೋನ್ಮುಖವಾಗಿದೆ - ಜನಾರ್ಧನ ಪೂಜಾರಿ.

ವಿಧವೆಯರಿಗೆ ಸೀರೆ, ಬಳೆ
ಪತಿಯನ್ನು ಕಳೆದುಕೊಂಡು ವಿಧವೆಯರು ಕುದ್ರೋಳಿ ಕ್ಷೇತ್ರದಲ್ಲಿ 2011ರಲ್ಲಿ ಸಮಾವೇಶಗೊಂಡು ಸೀರೆ, ಬಳೆ, ಕುಂಕುಮ, ಹೂವು ಪಡೆದುಕೊಂಡು ತಾವು ಅಮಂಗಳೆಯರಲ್ಲ ಎನ್ನುವ ಸಂದೇಶ ರವಾನಿಸಿದರು. ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರು ಪತಿಯನ್ನು ಕಳೆದುಕೊಂಡವರು ಅಮಂಗಳೆಯರಲ್ಲ ಎನ್ನುವ ಸಂದೇಶವನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು.

ಚಂಡಿಕಾಯಾಗ
ಪತಿ ಕಳೆದುಕೊಂಡ ಪುಣ್ಯವನಿತೆಯರು ದೀಪಾವಳಿಯ (2011) ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆದ ಚಂಡಿಕಾಯಾಗದಲ್ಲಿ ತೊಡಗಿಸಿಕೊಂಡು ಲಕ್ಷೀಪೂಜೆ, ಬೆಳ್ಳಿ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಅಕ್ಟೋಬರ್ 26ರಂದು ಬೆಳಿಗ್ಗೆ 9 ಗಂಟೆಗೆ ಸುಮಾರು 1500 ವನಿತೆಯರು ಭಾಗವಹಿಸಿದ್ದರು.

ನವದುರ್ಗೆಯರ ಪ್ರತಿಷ್ಟಾಪನೆ ಮತ್ತು ಪುಸ್ತಕ ಬಿಡುಗಡೆ
ಶನಿವಾರ (ಅ 5) ದಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವದುರ್ಗೆಯರ ಮತ್ತು ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿದೆ. ಮತ್ತು ದುರ್ಗಾಷ್ಟಮಿಯ ದಿನವಾದ ಅಕ್ಟೋಬರ್ 12ರಂದು ದೇವದಾಸ್ ಕಂಟ್ರಾಕ್ಟರ್ ವಿರಚಿತ 'ಮನಸಿದ್ದರೆ ಮಾರ್ಗ' ಪುಸ್ತಕ ಬಿಡುಗಡೆ ನಡೆಯಲಿದೆ ಎಂದು ಪೂಜಾರಿ ಪತ್ರಿಕಾಘೋಷ್ಠಿಯಲ್ಲಿ ಹೇಳಿದ್ದಾರೆ.












Click it and Unblock the Notifications