KSRTC: ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಓಡಲಿದೆ ಕೆಎಸ್‌ಆರ್‌ಟಿಸಿ ಬಸ್
ಮಂಗಳೂರು, ನವೆಂಬರ್ 07: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಖಾಸಗಿ ಬಸ್‌ಗಳ ಪಾರುಪತ್ಯವಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳನ್ನು ಹೆಚ್ಚಿಸಲು ಮುಂದಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ. ಪಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದೆ. ಅದರಲ್ಲೂ ಮಂಗಳೂರು ಕೆಎಸ್ಆರ್‌ಟಿಸಿ ವಿಭಾಗ ಯಾವ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಾಗುತ್ತದೆ ಎಂದು ಸಹ ಮಾಹಿತಿ ನೀಡಿದೆ.
ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗ ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಏಳು ಟ್ರಿಪ್ ಸಂಚಾರವನ್ನು ನಡೆಸಲು ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ. ಅಲ್ಲದೇ ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮಾರ್ಗದ ಬಸ್ ಸೇವೆ ಅಗತ್ಯವಾಗಿದೆ ಎಂದು ಹೇಳಿದೆ.

ಕರ್ನಾಟಕ ಸರ್ಕಾರ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುವ 'ಶಕ್ತಿ' ಯೋಜನೆ ಜಾರಿಗೊಳಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದರೆ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳ ಸಂಚಾರವೇ ಕಡಿಮೆ ಇದೆ ಎಂದು ಸಭೆಯಲ್ಲಿ ವಿವರಣೆ ನೀಡಿದೆ.
2014ರಲ್ಲಿ ಅನುಮತಿ ಕೇಳಿದೆ: ಕೆಎಸ್ಆರ್‌ಟಿಸಿ ಅಧಕಾರಿಗಳ ಮಾಹಿತಿ ಪ್ರಕಾರ 2014ರಲ್ಲಿಯೇ ಮಂಗಳೂರು-ಮೂಡಬಿದಿರೆ-ಕಾರ್ಕಳ ಮಾರ್ಗದಲ್ಲಿ ಸರ್ಕಾರಿ ಬಸ್ ಓಡಿಸಲು ಅನುಮತಿ ಕೇಳಲಾಗಿದೆ. ಮೊದಲು ಅನುಮತಿ ನೀಡಲಾಗಿತ್ತು. ಬಳಿಕ ಖಾಸಗಿ ಬಸ್ ಮಾಲೀಕರು ಇದನ್ನು ಪ್ರಶ್ನೆ ಮಾಡಿದರು.
ಬಳಿಕ ಮತ್ತೆ ಅನುಮತಿ ನೀಡಲಾಯಿತು. ಆದರೆ ಕೇವಲ ಮೂರು ಟ್ರಿಪ್ ಸಂಚಾರ ನಡೆಸಲು ಅನುಮತಿ ಕೊಡಲಾಯಿತು. ಮೂರು ಟ್ರಿಪ್ ಸಂಚಾರವನ್ನು ನಡೆಸುವುದು ಸಂಸ್ಥೆಯ ಆರ್ಥಿಕ ದೃಷ್ಟಿಯಿಂದ ಉತ್ತಮವಾದುದಲ್ಲ. ಆದ್ದರಿಂದ 7 ಟ್ರಿಪ್ ಸಂಚಾರ ನಡೆಸಲು ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಅಲ್ಲದೇ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಹಲವು ಮಾಹಿತಿಗಳನ್ನು ಹಂಚಿಕೊಂಡಿತು. ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಸರ್ಕಾರಿ ಬಸ್ ಓಡಿಸುತ್ತಿಲ್ಲ ಎಂದು ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಆದ್ದರಿಂದ ಬಸ್ ಓಡಿಸಲು ಪರ್ಮಿಟ್ ಕೇಳಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿತು.
ಆದರೆ ಸಭೆಯಲ್ಲಿ ಹಾಜರಿದ್ದ ಖಾಸಗಿ ಬಸ್ ಮಾಲೀಕರ ಪರ ವಕೀಲರು ಈ ಮಾರ್ಗದಲ್ಲಿ ಬಸ್ ಓಡಿಸುವ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಇತ್ಯರ್ಥವಾಗುವ ತನಕ ಬಸ್ ಓಡಿಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಕೆಎಸ್ಆರ್‌ಟಿಸಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಪರ್ಮಿಟ್ ನೀಡಿರುವ ಒಂದು ಟ್ರಪ್‌ನಲ್ಲಿಯೂ ಓಡಿಸಬೇಕು. ಈಗ ಏಕೆ ಬಸ್ ಓಡಿಸುತ್ತಿಲ್ಲ ಎಂದು ಖಾಸಗಿ ಬಸ್‌ನವರು ಪ್ರಶ್ನೆ ಮಾಡಿದರು. ಬಸ್ ಓಡಿಸುವ ಮೊದಲು ಮಾರ್ಗದ ಸಮೀಕ್ಷೆಯನ್ನು ಮಾಡಲಿ ಬಳಿಕ ತೀರ್ಮಾನ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಈ ಮಾರ್ಗದಲ್ಲಿ ಪೀಕ್ ಅವರ್ ಹೊರತುಪಡಿಸಿ ಪ್ರತಿ 10 ನಿಮಿಷಕ್ಕೊಂದು ಬಸ್ ಸಂಚಾರ ನಡೆಸುತ್ತದೆ. ಈಗ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭವಾದರೆ ಖಾಸಗಿ ಬಸ್ ಮಾಲೀಕರು ಏನು ಮಾಡಬೇಕು? ಎಂದು ಪ್ರಶ್ನೆ ಮಾಡಿದರು. ಹಲವು ಮಾರ್ಗಕ್ಕೆ ಪರ್ಮಿಟ್ ನೀಡಿದರೂ ಕೆಎಸ್ಆರ್‌ಟಿಸಿ ಬಸ್ ಓಡಿಸಲು ವಿಫಲವಾಗಿದೆ. ಈಗ ಹೊಸ ಮಾರ್ಗದಲ್ಲಿ ಬಸ್ ಓಡಿಸಲು ಬೇಡಿಕೆ ಇಡುತ್ತಿದ್ದಾರೆ ಎಂದು ಖಾಸಗಿ ಬಸ್ ಮಾಲೀಕರು ದೂರಿದರು.












Click it and Unblock the Notifications