• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ ಗಡಿಭಾಗದ ಪೆಟ್ರೋಲ್ ಬಂಕ್‌ಗಳಲ್ಲಿ ಭರ್ಜರಿ ವ್ಯಾಪಾರ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 19; ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆ ಕಡಿಮೆ ಮಾಡಿದೆ. ಇದರಿಂದಾಗಿ ದರ ಇಳಿಕೆಯಾಗಿದೆ. ಆದರೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಇತರ ರಾಜ್ಯಗಳು ಪೆಟ್ರೋಲ್ ದರದ ಮೇಲಿನ ತಮ್ಮ ಸೆಸ್ ಅನ್ನು ಕಡಿತಗೊಳಿಸಿಲ್ಲ.

ಈ ಹಿನ್ನಲೆಯಲ್ಲಿ ಆ ರಾಜ್ಯದಲ್ಲಿರುವ ಜನರು ಈಗ ಪೆಟ್ರೋಲ್‌ಗಾಗಿ ಪಕ್ಕದ ರಾಜ್ಯವನ್ನು ಆಶ್ರಯಿಸುತ್ತಿದ್ದಾರೆ. ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು ಇಳಿಸದ ಕಾರಣದಿಂದ ಕೇರಳದ ಗಡಿಭಾಗದ ಜಿಲ್ಲೆಗಳಿಂದ ಜನರು ಕರ್ನಾಟಕದ ಗಡಿ ಭಾಗದಲ್ಲಿರುವ ಪೆಟ್ರೋಲ್ ಬಂಕ್‌ಗಳಿಗೆ ಮುಗಿ ಬಿದ್ದಿದ್ದಾರೆ.

ಕರ್ನಾಟಕದ ಗಡಿಭಾಗದ ಪೆಟ್ರೋಲ್ ಬಂಕ್‌ಗಳಿಗೆ ಅದೃಷ್ಟ ಲಕ್ಷ್ಮಿ ಖುಲಾಯಿಸಿದ್ದು ಲಕ್ಷಾಂತರ ರೂಪಾಯಿ ವ್ಯವಹಾರವಾಗುತ್ತಿದೆ. ಇದರಿಂದ ಕರ್ನಾಟಕ ಗಡಿ ಭಾಗದ ಪೆಟ್ರೋಲ್ ಬಂಕ್‌ನವರಿಗೆ ಪ್ರತಿದಿನ ಹಬ್ಬವಾದರೆ ಕೇರಳ ಭಾಗದ ಪೆಟ್ರೋಲ್ ಬಂಕ್ ಗಳಿಗೆ ನಷ್ಟದಿಂದ ದಿನದೂಡುವಂತಾಗಿದೆ.

ಕೇರಳ ಭಾಗದ ಜನರು, ಕರ್ನಾಟಕದ ಗಡಿ ಜಿಲ್ಲೆಯ ಪೆಟ್ರೋಲ್ ಬಂಕ್‌ಗಳಿಗೆ ಬರುತ್ತಿರುವುದರಿಂದ ರಾಜ್ಯದ ಆದಾಯ ಕೂಡಾ ಏರಿಕೆ ಕಂಡಿದೆ. ಕೇರಳಕ್ಕಿಂತ ಕರ್ನಾಟಕದಲ್ಲಿ ಪೆಟ್ರೋಲ್‌ಗೆ 6 ರೂಪಾಯಿ, ಡಿಸೇಲ್‌ಗೆ 8 ರೂಪಾಯಿ ಅಂತರವಿದೆ. ಹೀಗಾಗಿ ಗಡಿಭಾಗದ ಪೆಟ್ರೋಲ್ ಬಂಕ್‌ಗಳಿಗೆ ಭರ್ಜರಿ ಆದಾಯ ಬರುತ್ತಿದೆ.

ಕೇರಳ ಭಾಗದ ಜನರನ್ನು ಆಕರ್ಷಿಸುವ ಸಲುವಾಗಿ ಪೆಟ್ರೋಲ್ ಬಂಕ್ ಎದುರಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಕೇರಳಕ್ಕಿಂತ ಪೆಟ್ರೋಲ್‌ಗೆ 6 ರೂಪಾಯಿ ಮತ್ತು ಡಿಸೇಲ್‌ 8 ರೂಪಾಯಿ ಕಡಿಮೆ ಇದೆ ಎಂಬ ಬ್ಯಾನರ್ ಹಾಕಲಾಗಿದೆ.

ಕರ್ನಾಟಕ-ಕೇರಳ ಗಡಿ ಭಾಗದ ತಲಪಾಡಿ ಪೆಟ್ರೋಲ್ ಬಂಕ್‌ಗಳಲ್ಲಿ ಈಗ ತಿಂಗಳಿಗೆ 13 ಲಕ್ಷ ಲೀಟರ್ ಪೆಟ್ರೋಲ್ ಮಾರಾಟವಾಗುತ್ತಿದೆ. ಕೇರಳ ಭಾಗಕ್ಕೆ ಹೋಗುವ ಪ್ರಯಾಣಿಕರು ವಾಹನಗಳಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾರೆ. ಕ್ಯಾನ್ ಗಳಲ್ಲೂ ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿದ್ದಾರೆ. "ಪೆಟ್ರೋಲ್‌ಗಾಗಿಯೇ ಗಡಿ ಜಿಲ್ಲೆಯವರೆಗೆ ಬಂದರೂ ನಮಗೆ ನಷ್ಟವಿಲ್ಲ" ಎಂದು ಹೇಳುತ್ತಾರೆ ಕೇರಳದ ಕಾಸರಗೋಡು ಜಿಲ್ಲೆಯ ರಾಜು.

 Kerala People Come To Karnataka For Petrol

ಇನ್ನು ಕೇರಳಿಗರಿಂದ ಪೆಟ್ರೋಲ್ ಬಂಕ್ ಮಾಲೀಕರು, ಸಿಬ್ಬಂದಿಗೂ ಭರ್ಜರಿ ಲಾಭವಾಗಿದೆ. "ಈ ಹಿಂದೆ ವಾಹನಗಳಿಗೆ ಕಾಯಬೇಕಾಗಿತ್ತು. ಆದರೆ ಈಗ ಒಂದು ನಿಮಿಷವೂ ಬಿಡುವಿಲ್ಲದೇ ಗ್ರಾಹಕರು ಬರುತ್ತಿದ್ದಾರೆ" ಅಂತಾ ತಲಪಾಡಿ ಪೆಟ್ರೋಲ್ ಬಂಕ್ ಸಿಬ್ಬಂದಿ ನವೀನ್ ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ಕೇರಳ ಭಾಗದ ಪೆಟ್ರೋಲ್ ಬಂಕ್‌ಗಳ ಸ್ಥಿತಿ ಮಾತ್ರ ಹೀನಾಯವಾಗಿದೆ‌‌. ದಿನಕ್ಕೆ 6,000 ರೂ. ಮೌಲ್ಯದ ಪೆಟ್ರೋಲ್ ಮಾರಾಟವಾಗುತ್ತಿದ್ದ ಬಂಕ್‌ನಲ್ಲಿ ಸದ್ಯ 2 ಸಾವಿರ ರೂ. ಗಳ ಪೆಟ್ರೋಲ್ ಹೋಗುತ್ತಿಲ್ಲ. ಇದರಿಂದ ಶೇ 75 ರಷ್ಟು ನಷ್ಟ ಉಂಟಾಗುತ್ತಿದೆ. ಆರು ಮಂದಿಯಿದ್ದ ಸಿಬ್ಬಂದಿಯನ್ನು 4 ಮಂದಿಗೆ ಇಳಿಸಲಾಗಿದೆ. ಹೀಗೆ ಮುಂದುವರಿದಲ್ಲಿ ಇರುವ ಸಿಬ್ಬಂದಿಗೆ ವೇತನ ಕೊಡಲು ಅಸಾಧ್ಯ ಎಂದು ಕೇರಳ ಪೆಟ್ರೋಲ್ ಬಂಕ್ ಪ್ರಬಂಧಕ ತಾಜುದ್ದೀನ್ ಹೇಳಿದ್ದಾರೆ..

15 ವರ್ಷದಿಂದ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಆದರೆ, ಇದೀಗ ಗ್ರಾಹಕರು ಪಂಪ್ ಒಳಗೆ ಬಂದು ಬೆಲೆ ವಿಚಾರಿಸಿ ವಾಪಸ್ಸಾಗುತ್ತಿದ್ದಾರೆ. ಕೇರಳ ಸರ್ಕಾರ ಇದನ್ನು ಮನಗಂಡು ಸುಂಕವನ್ನು ಇಳಿಕೆ ಮಾಡಿದಲ್ಲಿ ವ್ಯವಹಾರ ಮುಂದುವರೆಸಲು ಸಾಧ್ಯ ಎನ್ನುವುದು ಗಡಿಭಾಗದ ಪೆಟ್ರೋಲ್ ಬಂಕ್ ಮಾಲೀಕರ ಅಭಿಪ್ರಾಯವಾಗಿದೆ.

ನವೆಂಬರ್ 3ರಂದು ಟ್ವೀಟ್ ಮಾಡಿದ್ದ ಕರ್ನಾಟದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಇಳಿಸಿದ್ದು, ಜನರಿಗೆ ಮತ್ತಷ್ಟು ಹೆಚ್ಚಿನ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರವೂ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತಲಾ 7 ರೂ. ಗಳಷ್ಟು ಕಡಿಮೆ ಮಾಡಿದೆ" ಎಂದು ಹೇಳಿದ್ದರು.

"ನವೆಂಬರ್ 4ರ ನಾಳೆ ಸಂಜೆಯಿಂದ ಈ ದರ ಜಾರಿಯಾಗಲಿದೆ. ಕೇಂದ್ರ ಸರ್ಕಾರವು ಡೀಸಲ್ 10 ರೂ. ಹಾಗೂ ಪೆಟ್ರೋಲ್ 05 ರೂ. ಕಡಿಮೆಗೊಳಿಸಿದ್ದು ಸ್ವಾಗತಾರ್ಹ. ಜನರಿಗೆ ದೀಪಾವಳಿಯ ಉಡಗೊರೆ ನೀಡಿದ ಪ್ರಧಾನಿಗಳಿಗೆ ಮುಖ್ಯಮಂತ್ರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ರಾಜ್ಯಸರ್ಕಾರವು ಡೀಸೆಲ್‌ ಮತ್ತು ಪೆಟ್ರೋಲ್ ಮೇಲೆ ತಲಾ 7 ರೂ. ಕಡಿಮೆಗೊಳಿಸಲು ನಿರ್ಧರಿಸಿದೆ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದರು.

   Americaದಿಂದ ಪರಭಕ್ಷಕ Drones ಖರೀದಿಸಲು ಮುಂದಾದ India | Oneindia Kannada
   English summary
   Petrol price cheapest in Karnataka compare to Kerala. In Karnataka-Kerala border Kerala people come to Karnataka for petrol.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion