• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲ್ಲು ಗಣಿಗಾರಿಕೆಯಿಂದ ಅಪಾಯದಲ್ಲಿದೆ ಕಾರಿಂಜ ಕ್ಷೇತ್ರ: ದೇವಸ್ಥಾನ ಉಳಿಸಲು ಭಕ್ತರ ಹೋರಾಟ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 11: ಅದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜದಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಶ್ರೀ ಕಾರಿಂಜೇಶ್ವರ ದೇವಸ್ಥಾನ. ಅದ್ಭುತ ಪ್ರಕೃತಿಯ ಮಧ್ಯೆ ಬೃಹದಾದ ಬಂಡೆಯ ಮೇಲೆ ನೆಲೆ ನಿಂತ ಈಶ್ವರನ ಸನ್ನಿಧಾನವನ್ನು ನೋಡುವುದೇ ಕಣ್ಣಿಗೆ ಪರಮಾನಂದ.

ಐತಿಹಾಸಿಕ ಕಥೆಗಳನ್ನು ಹೇಳುವ ಐತಿಹ್ಯಗಳು, ಸುತ್ತಲೂ ಸಹ್ಯಾದ್ರಿಯ ಗಿರಿ ಶಿಖರಗಳು. ಭಕ್ತರ ಪಾಲಿಗೆ ಶ್ರದ್ಧಾಭಕ್ತಿಯ ಕೇಂದ್ರವಾದರೆ, ಪ್ರವಾಸಿಗರ ಪಾಲಿಗೆ ನೆಚ್ಚಿನ ಸ್ಥಳವಾಗಿದೆ. ಆದರೆ ಮಾನವನ ಸ್ವಾರ್ಥದಿಂದಾಗಿ ಇದೀಗ ಆ ಭಗವಂತನ ಸನ್ನಿಧಿಗೆ ಸಂಚಕಾರ ತಂದಿದೆ. ದೇವಾಲಯದ ಸುತ್ತಮುತ್ತ ನಡೆಯುತ್ತಿರುವ ನಾಲ್ಕು ಕಲ್ಲುಕ್ವಾರಿಯ ವಿರುದ್ಧ ಇದೀಗ ಜನರು ಜಾಗೃತಿ ಸಭೆಗೆ ಸಿದ್ಧರಾಗಿದ್ದಾರೆ.

ಬಂಟ್ವಾಳ ತಾಲೂಕಿನ ಕಾರಿಂಜದಲ್ಲಿರುವ ಕಾರಿಂಜೇಶ್ವರ ಕ್ಷೇತ್ರಕ್ಕೆ ಕೇವಲ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ದೇವಸ್ಥಾನ ಬೃಹತ್ ಬಂಡೆಯ ಮೇಲ್ಭಾಗದಲ್ಲಿ ಇರುವುದರಿಂದ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಕ್ಷೇತ್ರಗಳಲ್ಲಿ ಒಂದಾಗಿದೆ ಕಾರಿಂಜ ಕ್ಷೇತ್ರ.

ಆದರೆ ಈಗ ಈ ಸುಂದರ ದೇವಸ್ಥಾನಕ್ಕೆ ಕಲ್ಲು ಗಣಿಗಾರಿಕೆ ಕಂಟಕವಾಗುತ್ತಿದೆ. ದೇವಸ್ಥಾನದ ಸುತ್ತ ಕಾರ್ಯಾಚರಿಸುತ್ತಿರುವ ಕಲ್ಲು ಗಣಿಗಾರಿಕೆಯಿಂದ ಅಪಾಯವಾಗುತ್ತಿದೆ. ದೇಗುಲದ ಸುತ್ತಲೂ ನಾಲ್ಕು ಕಲ್ಲು ಗಣಿಗಾರಿಕೆಯ ಸ್ಫೋಟದಿಂದ ದೇಗುಲ ಬಿರುಕು ಬಿಟ್ಟಿದೆ. ತಡೆಗೋಡೆ ಈಗಾಗಲೇ ಕುಸಿದಿದ್ದು, ಸ್ಫೋಟದ ಸಂದರ್ಭದಲ್ಲಿ ಭಗವಂತನ ವಿಗ್ರಹವೇ ಕಂಪನ ಆದಂತಾಗುತ್ತಿದೆ.

ಹೀಗಾಗಿ ಪ್ರಭಾವಿ ವ್ಯಕ್ತಿಗಳು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಹಿಂದೂ ಜಾಗರಣ ವೇದಿಕೆ ರಣಕಹಳೆಯನ್ನು ಮೊಳಗಿಸಿದೆ. ನವೆಂಬರ್ 21ರ ಭಾನುವಾರದಂದು ದೇವಸ್ಥಾನದ ರಥಬೀದಿಯಲ್ಲಿ ಬೃಹತ್ ಜನಜಾಗೃತಿ ಸಭೆ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ದೇವಸ್ಥಾನದ ಭಕ್ತರು ಸೇರುವ ಸಾಧ್ಯತೆಗಳಿವೆ. ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯಾ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

Bantwal: The Karinjeshwara Temple Is In Danger From Stone Quarrying

ಕಲ್ಲು ಗಣಿಗಾರಿಕೆಯ ವಿರುದ್ಧ ಭಕ್ತರು ಸಿಡಿದೇಳಲು ವೈದಿಕ ಕಾರಣವೂ ಇದೆ. ದೇವಸ್ಥಾನದಲ್ಲಿ ಇತ್ತೀಚಿಗೆ ತಾಂಬೂಲ ಪ್ರಶ್ನೆ ಇಡಲಾಗಿತ್ತು. ಆ ಪ್ರಶ್ನೆಯಲ್ಲಿ ಕಾರಿಂಜೇಶ್ವರನ ಬೆಟ್ಟದ ಕಲ್ಲು ಸುಮಾರು ಆರು ಕಿ.ಮೀ. ವ್ಯಾಪ್ತಿಯವರೆಗೆ ಹರಡಿಕೊಂಡಿದೆ ಎಂಬುದು ತಿಳಿದುಬಂದಿತ್ತು. ಹರಡಿಕೊಂಡಿರುವ ಕಲ್ಲು ಈ ಬೆಟ್ಟದ ಪಂಚಾಗವಿದ್ದಂತೆ. ಇದನ್ನು ಲೂಟಿ ಮಾಡಿದರೆ ಶಿವನ ಕೋಪಕ್ಕೀಡಾಗುವುದು ಎಂಬುದನ್ನು ಸೂಚಿಸಲಾಗಿತ್ತು. ಹೀಗಾಗಿ ಈ ಅಕ್ರಮದ ವಿರುದ್ಧ ಜನ ಎಚ್ಚೆತ್ತುಕೊಂಡಿದ್ದಾರೆ.

ಪವಿತ್ರ ಕ್ಷೇತ್ರದ ಸಂರಕ್ಷಣೆಗಾಗಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯ ವಿರುದ್ಧ, ಗೋಮಾಳ ಭೂಮಿಯನ್ನು ಅತಿಕ್ರಮಿಸುವವರ ವಿರುದ್ಧ, ಕ್ಷೇತ್ರಕ್ಕೆ ಅಪವಿತ್ರತೆ ತರುವವರ ವಿರುದ್ಧ ಸಮರ ಸಾರಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ಸ್ಥಳೀಯರು ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದಾರೆ. ಆದರೆ ಇಲ್ಲಿ ಕಾಣದ ಕೈಗಳ, ಪ್ರಭಾವಿ ವ್ಯಕ್ತಿಗಳಿಂದ ಈ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ ಅನ್ನುವುದು ಭಕ್ತರ ಆರೋಪವಾಗಿದೆ.

ಅಲ್ಲದೇ ಇತ್ತೀಚೆಗೆ ಕಾರಿಂಜ ಕ್ಷೇತ್ರದೊಳಗೆ ಅನ್ಯಮತೀಯ ಯುವಕರ ಗುಂಪು ಪಾದರಕ್ಷೆಗಳನ್ನು ಧರಿಸಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದರು. ದೇವಸ್ಥಾನವನ್ನು ಮೋಜು- ಮಸ್ತಿಗೆ ಬಳಸಿಕೊಂಡಿದ್ದರು. ಈ ವಿಚಾರ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು 6 ಮಂದಿ ಯುವಕರನ್ನು ಬಂಧನ ಮಾಡಿದ್ದಾರೆ.

ಒಟ್ಟಿನಲ್ಲಿ ಕಲ್ಲುಗಣಿಗಾರಿಕೆಯಿಂದ ಇತಿಹಾಸ ಪ್ರಸಿದ್ಧ ಕ್ಷೇತ್ರ ಅಪಾಯವನ್ನು ಎದುರಿಸುತ್ತಿದೆ. ಸದ್ಯ ಜನ ಒಗ್ಗಟ್ಟಾಗಿ ದೇವಸ್ಥಾನದ ಸಂರಕ್ಷಣೆಗೆ ಮುಂದೆ ಬಂದಿದ್ದು, ಮುಂದೆನಾಗುತ್ತದೆ ಎಂಬುದನ್ನು ಎಂದು ಕಾದುನೋಡಬೇಕಿದೆ.

English summary
Stone Quarrying is taking place around the Karinjeshwara Temple at Karinja in Bantwal taluk in Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion