• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಳೆಯಲ್ಲಿ ದ್ವೀಪವಾಗುವ ಕಲ್ಮಕಾರು; ಗೋಳು ಕೇಳೋರ್ಯಾರು?

|

ಮಂಗಳೂರು ಮೇ 28: ಮಳೆಗಾಲ ಅರಂಭವಾಯಿತೆಂದರೆ ಆ ಗ್ರಾಮದ ಜನರಿಗೆ ಭಯ ಆವರಿಸುತ್ತದೆ. ಮಳೆ ಬೀಳುತ್ತಿದ್ದಂತೆ ಆ ಊರಿನ ಜನರು ತಮ್ಮ ಮನೆ, ಮಠ ಬಿಟ್ಟು ತೆರಳಲು ಗಂಟು-ಮೂಟೆ ಕಟ್ಟಿ ಸಿದ್ಧರಾಗುತ್ತಾರೆ. ಮಳೆ ಒಂದಿಷ್ಟು ಹೆಚ್ಚಾದರೂ ಆ ಗ್ರಾಮ ಸಂಪೂರ್ಣ ದ್ವೀಪದಂತಾಗಿ, ಗ್ರಾಮಕ್ಕೆ ಇರುವ ಎಲ್ಲಾ ಸಂಪರ್ಕಗಳೂ ಕಡಿದು ಹೋಗುತ್ತವೆ. ಆ ಗ್ರಾಮದ ಎರಡೂ ಪಕ್ಕದಲ್ಲೂ ಹೊಳೆಗಳು ಹರಿಯುತ್ತಿದ್ದು, ಹೊಳೆಗೆ ಸೇತುವೆ ಸಂಪರ್ಕವಿಲ್ಲದ ಕಾರಣ, ಒಂದೋ ಮಳೆ ರಭಸ ಆರಂಭಗೊಳ್ಳುವ ಮೊದಲೇ ಮನೆ ಬಿಡಬೇಕು, ಇಲ್ಲವೇ ಜೀವ ಕೈಯಲ್ಲಿಟ್ಟು ಮನೆಯಲ್ಲೇ ಉಳಿಯಬೇಕು. ಅಂಥ ಪರಿಸ್ಥಿತಿ ಇದೆ.

ದಕ್ಷಿಣಕನ್ನಡ ಜಿಲ್ಲೆಯ ಅತ್ಯಂತ ಕುಗ್ರಾಮಗಳಲ್ಲಿ ಒಂದಾದ ಕಲ್ಮಕಾರು ವ್ಯಾಪ್ತಿಗೆ ಬರುವ ಗ್ರಾಮದ ಜನರ ಪಾಡು ಇದು. ಪುಪ್ಪಗಿರಿ ತಪ್ಪಲಿನಲ್ಲಿರುವ ಈ ಗ್ರಾಮದ ಜನ ಬೇಸಿಗೆ ಕಾಲದಲ್ಲಿ ಇದ್ದುದರಲ್ಲೇ ತಾವಾಯಿತು, ತಮ್ಮ ಪಾಡಾಯಿತು ಎನ್ನುವ ನೆಮ್ಮದಿಯ ಜೀವನವನ್ನು ಸಾಗಿಸುವವರು. ಆದರೆ ಮಳೆಗಾಲ ಆರಂಭಗೊಂಡಿತೆಂದರೆ ಇವರಲ್ಲಿ ನಡುಕ ಹೆಚ್ಚಾಗುತ್ತದೆ. ಮಳೆಯ ಆರ್ಭಟ ಹೆಚ್ಚಾಗುತ್ತಿದ್ದಂತೆ, ಈ ಗ್ರಾಮದ ಬಹುತೇಕ ಕುಟುಂಬಗಳು ತಮ್ಮ ಮನೆಗಳನ್ನು ಬಿಟ್ಟು ಬೇರೆಡೆಗೆ ಹೋಗಬೇಕಾದ ಸ್ಥಿತಿಯಿದೆ.

ಕೂಜುಮಲೆ, ಕಲ್ಮಕಾರಿನಲ್ಲಿ ನಡೆದ ದುರಂತವನ್ನು ಜಿಲ್ಲಾಡಳಿತ ಮುಚ್ಚಿಟ್ಟಿದ್ದೇಕೆ?

ಹೌದು. ಮಳೆಗಾಲದಲ್ಲಿ ಕಾಜಿಮಡ್ಕ, ಕೊಪ್ಪಡ್ಕ, ಮೆಂತೆಕಜೆ, ಅಂಜನಕಜೆ ಊರುಗಳು ಸಂಪೂರ್ಣ ಜಲಾವೃತವಾಗುತ್ತವೆ.ಈ ಪ್ರದೇಶದ ಇಕ್ಕೆಲಗಳಲ್ಲಿ ಹೊಳೆ ಹರಿಯುತ್ತಿದ್ದು, ಹೊಳೆಗೆ ಸೇತುವೆ ವ್ಯವಸ್ಥೆಯಿಲ್ಲದ ಕಾರಣ ಈ ಭಾಗದ ಜನ ಮಳೆಗಾಲದ ಅನಾಹುತ ಸಂಭವಿಸುವ ಮೊದಲೇ ಊರು ಬಿಡುತ್ತಾರೆ.

ಕಳೆದ ಬಾರಿಯ ಮಳೆಗೂ ಈ ಗ್ರಾಮದ ಹಲವು ಕುಟುಂಬಗಳು ಊರು ಬಿಟ್ಟು ಗ್ರಾಮದ ಪಕ್ಕದಲ್ಲೇ ಇರುವ ಸಂಬಂಧಿಕರ ಮನೆಗೆ ವಲಸೆ ಹೋಗಿದ್ದರು. ಒಮ್ಮೆಯಲ್ಲ, ಪ್ರತಿವರ್ಷದ್ದೂ ಇದೇ ಕಥೆಯೇ. ಊರಿಗೆ ಸಂಪರ್ಕ ನೀಡುವ ಹೊಳೆಗೆ ಹಾಕಿದ ಅಡಿಕೆ ಮರಗಳಿಂದ ನಿರ್ಮಿಸಿದ ಪಾಲಗಳೂ ನೀರಿಗೆ ಕೊಚ್ಚಿ ಹೋಗುವ ಕಾರಣ ಮಳೆ ಜೋರಾಗುವ ಲಕ್ಷಣ ಕಂಡ ಕೂಡಲೇ ಮನೆ ಬಿಡುವುದು ಅನಿವಾರ್ಯವಾಗುತ್ತದೆ.

ಎದುರಾಗುತ್ತಿದೆ ಪಶ್ಚಿಮ ಘಟ್ಟದ ತಪ್ಪಲು ಕುಸಿಯುವ ಭೀತಿ!

ಕಳೆದ ಬಾರಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದ ಈ ಭಾಗದಲ್ಲಿ ಹಲವು ಅನಾಹುತಗಳು ಸಂಭವಿಸಿದೆ. ಗುಡ್ಡ ಕುಸಿದ ಪರಿಣಾಮ ಇಲ್ಲಿನ ಹಲವು ಮನೆಗಳು ಜಖಂ ಆಗಿದ್ದವು. ಈ ಹೊಳೆಗಳಿಗೆ ಶಾಶ್ವತವಾಗಿ ಒಂದು ಸೇತುವೆ ನಿರ್ಮಿಸಬೇಕೆಂಬ ಜನರ ಬೇಡಿಕೆಗೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಸುಳ್ಯ ತಾಲೂಕಿನ ವ್ಯಾಪ್ತಿಗೆ ಬರುವ ಹಾಗೂ ಸುಳ್ಯ ಶಾಸಕ ಎಸ್.ಅಂಗಾರರ ವಿಧಾನಸಭಾ ವ್ಯಾಪ್ತಿಯಲ್ಲೂ ಬರುವ ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಹಾಗೂ ಇತರ ಸಮುದಾಯಕ್ಕೆ ಸೇರಿದ 100 ಕ್ಕೂ ಮಿಕ್ಕಿದ ಮನೆಗಳು ಈ ಪ್ರದೇಶದಲ್ಲಿದೆ.

ಪ್ರತಿವರ್ಷ ಮಳೆಗಾಲದಲ್ಲಿ ಹಾನಿಯಾದ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡುವುದೊಂದನ್ನು ಬಿಟ್ಟರೆ, ಬೇರೇನೂ ಮಾಡಿಲ್ಲ ಎನ್ನುವ ಆರೋಪವೂ ಸ್ಥಳೀಯರದ್ದಾಗಿದೆ.

ಪ್ರಕೃತಿಯೇ ಮುನಿದು ನಿಂತರೆ ಬದುಕುವುದಾದರೂ ಹೇಗೆ?

ಮಳೆಗಾಲದಲ್ಲಿ ಸಂಪೂರ್ಣ ದ್ವೀಪದಂತಾಗುವ ಈ ಗ್ರಾಮದ ಜನರಿಗೆ ಮೂಲಭೂತ ಸೌಲಭ್ಯವೂ ಮರೀಚಿಕೆಯಾಗಿದೆ. ಮಳೆಯಿಂದಾಗಿ ಮನೆ ಬಿಡಲೂ ಸಾಧ್ಯವಾಗದೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಇನ್ನಾದರೂ ಸಂಬಂಧಪಟ್ಟವರು ಈ ಗ್ರಾಮದ ಜನರ ಬೇಡಿಕೆಗೆ ಸ್ಪಂದಿಸುತ್ತಾರೋ ಅನ್ನೋದನ್ನ ಕಾದು ನೋಡಬೇಕಿದೆ.

English summary
Resident of Kalmakaru in Sullia taluk waiting for bridge. 100 families live in this village. During heavy rain this village turn in to island.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X