ಮೋದಿಯ ಛೇಡಿಸಿದ್ದ ಪೂಜಾರಿಗೆ ಆಯೋಗ ಮಂಗಳಾರತಿ
ಮಂಗಳೂರು, ಮಾರ್ಚ್ 18- ಕಾಂಗ್ರೆಸ್ಸಿನ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜನಾರ್ದನ ಪೂಜಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣಾ ಆಯೋಗವು ಸ್ವಯಂ ಪ್ರೇರಣೆಯಿಂದ ಜನಾರ್ದನ ಪೂಜಾರಿ ಅವರ ವಿರುದ್ಧ ದೂರನ್ನು ದಾಖಲಿಸಿಕೊಂಡಿದ್ದು, ನೋಟಿಸ್ ಜಾರಿ ಮಾಡಿದೆ.
ಕಳೆದ ವಾರ ಮೂಡಬಿದಿರೆಯಲ್ಲಿ ಪಾದಯಾತ್ರೆ ಕೈಗೊಂಡಿದ್ದ ವೇಳೆ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು.

ಸ್ಥಳೀಯ ಚುನಾವಣಾ ಅಧಿಕಾರಿಗಳು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯತ್ತ ಪೂಜಾರಿ ಎಸೆದಿದ್ದ ಪ್ರಶ್ನೆಯನ್ನು ವಿಡಿಯೋದಲ್ಲಿ ದಾಖಲಿಸಿಕೊಂಡಿದ್ದರು. ಸದರಿ ವಿಡಿಯೋವನ್ನು ಪರಿಶೀಲಿಸಿದ ಸಹಾಯಕ ಚುನಾವಣಾಧಿಕಾರಿ ಡಾ. ಅಶೋಕ್ ಅವರು 'ಪೂಜಾರಿ ಅವರ ಮಾತುಗಳು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ಸ್ವಯಂ ಪ್ರೇರಣೆಯಿಂದ ಪೂಜಾರಿ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ' ಎಂದು ಹೇಳಿದ್ದಾರೆ.
ಅದೇ ರೀತಿ, ನವಿ ಮುಂಬೈ ಕಾರ್ಪೊರೇಟರ್ ಸಂತೋಷ್ ಶೆಟ್ಟಿ ವಿರುದ್ಧವೂ ಇಂತಹುದೇ ದೂರು ದಾಖಲಿಸಿಕೊಳ್ಳಲಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಬಹಿರಂಗಪಡಿಸುವಂತೆ ಆರ್ ಎಸ್ಎಸ್ ಅನ್ನು ಒತ್ತಾಯಿಸಿದ್ದರು. 'ದೇಶದ ಪ್ರತಿಯೊಬ್ಬರೂ ನೆಹರೂ ವಂಶವನ್ನು ಬಲ್ಲರು. ಆದರೆ ಮೋದಿ ವಂಶದ ಬಗ್ಗೆ ಯಾರಿಗೂ ಗೊತ್ತಿಲ್ಲ' ಎಂದು ಸಂತೋಷ್ ಶೆಟ್ಟಿ ಹೇಳಿದ್ದರು.


Click it and Unblock the Notifications
