ಮಂಗಳೂರು: 'ಡಿಜಿಟಲ್ ಪೇ'ನಲ್ಲಿ ಭಾರೀ ವಂಚನೆ; ವರ್ತಕರೇ ಎಚ್ಚರ!
ಮಂಗಳೂರು, ಏಪ್ರಿಲ್ 4: ಪ್ರಧಾನಿ ನರೇಂದ್ರ ಮೋದಿ ಸರಕಾರ ಡಿಜಿಟಲ್ ಪೇಮೆಂಟ್‌ಗೆ ಒತ್ತು ನೀಡಿದ ಬಳಿಕ ದೇಶಾದ್ಯಂತ ಕ್ಯಾಶ್‌ಲೆಸ್ ವ್ಯವಹಾರ ಬಹಳಷ್ಟು ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಇಂತಹ ಕ್ಯಾಶ್‌ಲೆಸ್ ವ್ಯವಹಾರಗಳೇ ನಡೆಯುತ್ತಿದೆ.
ಆದರೆ ಇದನ್ನೇ ಬಂಡವಾಳವಾಗಿರಿಸಿಕೊಂಡಿರುವ ಸೈಬರ್ ಖದೀಮರು ಡಿಜಿಟಲ್ ಪೇಮೆಂಟ್ ಮೂಲಕವೇ ಭಾರೀ ಧೋಖಾ ನಡೆಸುತ್ತಿದ್ದಾರೆ. ಇಂತಹ ವಂಚನೆಗಳಿಗೆ ಸಿಲುಕಿರುವ ಬಹಳಷ್ಟು ಮಂದಿ ಉದ್ಯಮಿಗಳು, ವ್ಯಾಪಾರಿಗಳು ಹಣ ಕಳೆದುಕೊಂಡು ಪೊಲೀಸ್ ಠಾಣೆಯ ಕದ ತಟ್ಟುತ್ತಿದ್ದಾರೆ.
ಜನರು ಕ್ಯಾಶ್‌ಲೆಸ್ ವ್ಯವಹಾರಗಳತ್ತ ಒಲವು ತೋರಿಸುತ್ತಿದ್ದಂತೆ ವ್ಯಾಪಾರಿಗಳು ತಮ್ಮ ವಹಿವಾಟುಗಳನ್ನು ಡಿಜಿಟಲೈಸ್ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ತಮ್ಮ ವ್ಯಾಪಾರ ವಹಿವಾಟು ನಡೆಯುವ ಸ್ಥಳಗಳು, ಅಂಗಡಿ- ಮಳಿಗೆಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲು ಆರಂಭಿಸಿದ್ದಾರೆ.

ಇಂತಹ ಮಳಿಗೆಗಳಿಗೆ ಗ್ರಾಹಕರ ಸೋಗಿನಲ್ಲಿ ಬರುವ ಸೈಬರ್ ಖದೀಮರು ತಮಗೆ ಬೇಕಾಗುವ ವಸ್ತುಗಳನ್ನು ಖರೀದಿಸಿ ಡಿಜಿಟಲ್ ಪೇಮೆಂಟ್ ಮಾಡುತ್ತಾರೆ. ಆದರೆ ಹಣ ಪಾವತಿಯಾಗಿರುವ ಸೂಚನೆ ಅವರ ಮೊಬೈಲ್‌ನಲ್ಲಿ ತೋರಿಸುತ್ತದೆ. ಹಣ ಪಾವತಿಯಾದ ಬಗ್ಗೆ ಅಂಗಡಿ ಮಾಲಕನಿಗೂ ಮೆಸೇಜ್ ಬರುತ್ತದೆ. ಆದರೆ ಹಣ ಖಾತೆಗೆ ಹಣ ಜಮೆ ಆಗಿರುವುದಿಲ್ಲ.
ಅಂಗಡಿ, ಮಳಿಗೆಗಳ ಕ್ಯೂಆರ್ ಕೋಡ್‌ಗಳ ಬಗ್ಗೆಯೂ ಮಾಲೀಕರು ನಿಗಾ ಇರಿಸಬೇಕಾಗುತ್ತದೆ. ಕೆಲವೊಂದು ಕಡೆಗಳಲ್ಲಿ ಅಂಗಡಿಗಳ ಕ್ಯೂಆರ್ ಕೋಡ್‌ಗಳ ಮೇಲೆ ಸೈಬರ್ ಖದೀಮರು ತಮ್ಮ ಕೋಡ್‌ಗಳನ್ನು ಅಂಟಿಸಿ ಭಾರೀ ವಂಚನೆ ನಡೆಸುತ್ತಿದ್ದಾರೆ. ಈ ಮೂಲಕ ಕ್ಯೂಆರ್ ಕೋಡ್ ಬಳಸಿ ಪೇಮೆಂಟ್ ಮಾಡಿರುವ ಗ್ರಾಹಕರ ಹಣ ಸೈಬರ್ ವಂಚಕರ ಪಾಲಾಗುತ್ತದೆ. ಈ ಬಗ್ಗೆ ಎಚ್ಚರಿಕೆ ಅತ್ಯಗತ್ಯ ಎಂದು ಪೊಲೀಸರು, ಸೈಬರ್ ತಂತ್ರಜ್ಞರು ಹೇಳುತ್ತಿದ್ದಾರೆ. ಈ ಬಗ್ಗೆ ಅನೇಕ ದೂರುಗಳು ದಾಖಲಾಗುತ್ತಿದೆ. ಪೊಲೀಸರೂ ಇಂತಹ ಮೋಸದಾಟಕ್ಕೆ ಕಡಿವಾಣ ಹಾಕಲು ಸೈಬರ್ ಖದೀಮರ ಮೇಲೆ ನಿಗಾ ಇರಿಸಿದ್ದಾರೆ.
"ಬೇರೆ ಬೇರೆ ರೀತಿಯಲ್ಲಿ ವಂಚನೆಗಳನ್ನು ಮಾಡುವ ವಂಚಕರು ಅಪರಿಚಿತ ದೂರವಾಣಿ ನಂಬರ್‌ನಿಂದ ಕರೆ ಮಾಡಿ, ನೀವು ಈ ಹಿಂದೆ ಡಿಜಿಟಲ್ ಪೇಮೆಂಟ್ ಮಾಡಿದ್ದೀರಿ. ನಿಮಗೆ ಕ್ಯಾಶ್ ರಿವಾರ್ಡ್ ಬಂದಿದೆ ಎಂದು ನಂಬುವಂತೆ ಮಾಡುತ್ತಾರೆ. ಇದಾದ ಕೆಲವೇ ಹೊತ್ತಿನಲ್ಲಿ ಗೂಗಲ್ ಪೇನಲ್ಲಿ ರಿಕ್ವೆಸ್ಟ್ ಕಳಿಸುತ್ತಾರೆ. ಅದನ್ನು ಒಂದು ವೇಳೆ ಸ್ವೀಕರಿಸಿದರೆ ಕ್ಷಣಾರ್ಧದಲ್ಲಿ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ. ಡಿಜಿಟಲ್ ಪೇಮೆಂಟ್ ಸಾಕಷ್ಟು ಅನುಕೂಲವಾದರೂ ಅದರ ಒಳಿತು ಕೆಡುಕುಗಳ ಬಗ್ಗೆ ವ್ಯವಹಾರ ಮಾಡುವವರು ಎಚ್ಚರ ವಹಿಸಬೇಕು. ಹಣ ಖಾತೆಗೆ ಜಮೆಯಾಗಿರುವುದು ದೃಢಪಟ್ಟ ಮೇಲೆಯೇ ವಸ್ತುಗಳನ್ನು ನೀಡಬೇಕು ಇಲ್ಲದಿದ್ದಲ್ಲಿ ವಂಚನೆಗೊಳಗಾಗುವುದು ಖಂಡಿತ," ಎಂದು ಸೈಬರ್ ತಜ್ಞ ಅನಂತ ಪ್ರಭು ಹೇಳುತ್ತಾರೆ.

ಸೈಬರ್ ಖದೀಮರು ತಂತ್ರಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಹೊಸ ಹೊಸ ರೀತಿಯಲ್ಲಿ ಜನರನ್ನು ತಮ್ಮ ಮೋಸದ ಬಲೆಗೆ ಸಿಲುಕಿಸುತ್ತಿದ್ದಾರೆ. ಜನರಿಗೆ ಗೊತ್ತಿಲ್ಲದಂತೆಯೇ ಅವರ ಖಾತೆಗೆ ಕನ್ನ ಹಾಕಿ ದುಡ್ಡು ಲಪಟಾಯಿಸುತ್ತಿದ್ದಾರೆ. ಈ ಬಗ್ಗೆ ಅವರಿಗೆ ತಿಳಿಯುವಷ್ಟರಲ್ಲಿ ಕಾಲ ಮೀರಿ ಹೋಗಿರುತ್ತದೆ. ಎಷ್ಟೋ ಪ್ರಕರಣದಲ್ಲಿ ಕಳೆದುಕೊಂಡ ಹಣದ ಬಗ್ಗೆ ಆಸೆಯನ್ನೇ ಬಿಡಬೇಕಾಗುತ್ತದೆ.
ಏಕೆಂದರೆ ಎಷ್ಟೋ ಸಂದರ್ಭದಲ್ಲಿ ಸೈಬರ್ ಖದೀಮರು ಎಲ್ಲಿಯೋ ಕುಳಿತುಕೊಂಡು ತಮ್ಮ ವಂಚನೆಯ ಬಲೆಯನ್ನು ಬೀಸಿ ಜನರನ್ನು ಅದರಲ್ಲಿ ಕೆಡವಿ ಹಾಕಿ ದುಡ್ಡು ಲಪಟಾಯಿಸುತ್ತಾರೆ. ಅದಕ್ಕೆ ಬಹಳ ಎಲ್ಲರೂ ಜಾಗರೂಕತೆಯಿಂದ ವ್ಯವಹಾರ ಮಾಡುವುದು ಸೂಕ್ತ ಎಂದು ಸೈಬರ್ ತಜ್ಞರು ಹೇಳುತ್ತಾರೆ.
ಇನ್ನು ಈ ಘಟನೆ ಬಗ್ಗೆ ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣವನ್ನು ಸೈಬರ್ ಕ್ರೈಂ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮಂಗಳೂರಿನಲ್ಲಿ ಶೇ.60ರಷ್ಟು ವ್ಯಾಪಾರ ವಹಿವಾಟು ಡಿಜಿಟಲ್ ಪೇ ಮೂಲಕ ಆಗುತ್ತಿದೆ.
"ಡಿಜಿಟಲ್ ಪೇ ಮೂಲಕ ಹಣ ಧೋಖಾ ಮಾಡುವ ಕೆಲಸವೂ ಆಗುತ್ತಿದೆ. ಈ ಬಗ್ಗೆ ಕೆಲವು ವರ್ತಕರು ಮಾಹಿತಿ ನೀಡಿದ್ದಾರೆ. ವರ್ತಕರು ಕ್ಯೂ ಆರ್ ಕೋಡ್‌ಗಳನ್ನು ಪರಿಶೀಲನೆ ಮಾಡಬೇಕು. ಅಕೌಂಟ್‌ಗೆ ಹಣ ಪಾವತಿ ಆದ ಬಗ್ಗೆ ಕೂಡಲೇ ಖಾತರಿಪಡಿಸಿಕೊಳ್ಳಬೇಕು. ವರ್ತಕರಿಂದ ಬಂದ ಮಾಹಿತಿಯ ಹಿನ್ನಲೆಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ," ಎಂದು ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ.












Click it and Unblock the Notifications