Mangalore University: ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಹೇಮಾವತಿ ವಿ. ಹೆಗ್ಗಡೆಗೆ ಗೌರವ ಡಾಕ್ಟರೇಟ್
ಮಂಗಳೂರು, ಏಪ್ರಿಲ್ 21: ತುಳು ರಂಗಭೂಮಿಯ ಅಪ್ರತಿಮ ಕಲಾವಿದ ದೇವದಾಸ್ ಕಾಪಿಕಾಡ್‌ಗೆ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ 40ನೇ ಘಟಿಕೋತ್ಸವದ ಹಿನ್ನಲೆಯಲ್ಲಿ ದೇವದಾಸ್ ಕಾಪಿಕಾಡ್ ಸೇರಿದಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ವಿ. ಹೆಗ್ಗಡೆ ಮತ್ತು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಏಪ್ರಿಲ್ 23ರಂದು ಕೋಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತದೆ.
ದೇವದಾಸ್ ಕಾಪಿಕಾಡ್ ಆಲ್‌ರೌಂಡರ್ ಕಲಾವಿದರಾಗಿದ್ದಾರೆ. ತುಳು ರಂಗಭೂಮಿ, ತುಳು ಚಿತ್ರರಂಗದಲ್ಲಿ ಅತೀ ಪ್ರಸಿದ್ಧಿ ಗಳಿಸಿದ ನಟರಾಗಿದ್ದಾರೆ. ಇದಷ್ಟೇ ಅಲ್ಲದೇ ಬರಹಗಾರ, ನಿರ್ದೇಶಕ, ಕಥೆಗಾರ, ಗೀತ ರಚನೆಕಾರ, ಗಾಯಕ, ನಿರ್ಮಾಪಕ, ಹಾಸ್ಯನಟನಾಗಿಯೂ ದೇವದಾಸ್ ಕಾಪಿಕಾಡ್ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ್ದಾರೆ.
ಕಳೆದ 30 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ದೇವದಾಸ್ ಕಾಪಿಕಾಡ್ ಸಕ್ರಿಯರಾಗಿದ್ದಾರೆ. 1989ರಲ್ಲಿ ದೇವದಾಸ್ ಕಾಪಿಕಾಡ್ "ನಲಗೆ ಬಲೇ ಚಾ ಪರ್ಕ' ಎಂಬ ನಾಟಕ ಜೀವನದ ಬಹು ದೊಡ್ಡ ತಿರುವನ್ನು ನೀಡಿತು. ಆ ಬಳಿಕ ಕಾಪಿಕಾಡ್ ಇದೇ ನಾಟಕದ ಹೆಸರನ್ನು ಇಟ್ಟುಕೊಂಡು ನಾಟಕ ತಂಡವನ್ನು ರಚಿಸಿ ಗೆಲುವಿನ ನಾಗಲೋಟವನ್ನೇ ಮಾಡಿದ್ದಾರೆ.
ತುಳು ರಂಗಭೂಮಿಯಲ್ಲಿ ದೇವದಾಸ್ ಕಾಪಿಕಾಡ್ 55 ನಾಟಕಗಳನ್ನು ರಚಿಸಿ ನಿರ್ದೇಶನ ಮಾಡಿದ್ದಾರೆ. ಜಗತ್ತಿನಾದ್ಯಾಂತ 8000ಕ್ಕೂ ಅಧಿಕ ನಾಟಕ ಪ್ರದೇಶನವನ್ನು ದೇವದಾಸ್ ಕಾಪಿಕಾಡ್ ನೀಡಿದ್ದಾರೆ. ತುಳುನಾಡಿನಲ್ಲಿ ಸರ್ವಮತದ ಜನರ ಮೊಗದಲ್ಲಿ ನಗು ಅರಳಿಸಿದ ಕೀರ್ತಿ ದೇವದಾಸ್ ಕಾಪಿಕಾಡ್‌ರವರದ್ದಾಗಿದೆ.
ಯುವ ಕಲಾವಿದರ ಮಾಸ್ಟರ್ ಆಗಿರುವ ದೇವದಾಸ್ ಕಾಪಿಕಾಡ್ ತುಳು ಚಿತ್ರರಂಗದಲ್ಲೂ ಛಾಪು ಮೂಡಿಸಿದ್ದಾರೆ. ಬೊಳ್ಳಿ ಮೂವೀಸ್ ಎಂಬ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವನ್ನೂ ದೇವದಾಸ್ ಕಾಪಿಕಾಡ್ ಮಾಡಿದ್ದಾರೆ.
ದೇವದಾಸ್ ಕಾಪಿಕಾಡ್ ಅದ್ಭುತ ಪ್ರತಿಭೆಯನ್ನು ಸ್ಯಾಂಡಲ್‌ವುಡ್ ಖ್ಯಾತ ನಟ ರಮೇಶ್ ಅರವಿಂದ್ ಸೇರಿದಂತೆ ದಿಗ್ಗಜ ನಟರು ಮೆಚ್ಚಿಕೊಂಡಿದ್ದಾರೆ. ತುಳು ರಂಗಭೂಮಿ ಮತ್ತು ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಾದೇಶಿಕ ಭಾಷೆಯ ಬೆಳವಣಿಗೆಗೆ ನೀಡಿದ ಅತ್ಯಮೂಲ್ಯ ಸೇವೆಯನ್ನು ಗಮನಿಸಿ ಇದೀಗ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.