ಪೊಲೀಸರ ಏಟಿಗೆ ಕಾರ್ಯಕರ್ತನ ಕಿವಿ ತಮಟೆಗೆ ಹಾನಿ: ಪುತ್ತೂರಿನಲ್ಲಿ ಕಟೀಲ್ ವಿರುದ್ಧ ಭುಗಿಲೆದ್ದ ಆಕ್ರೋಶ
ಮಂಗಳೂರು, ಮೇ 24: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಭಂಧಿಸಿದಂತೆ ಪೊಲೀಸರು ಹಲ್ಲೆ ನಡೆಸಿದ ಹಿಂದೂ ಕಾರ್ಯಕರ್ತನ ಕಿವಿಯ ತಮಟೆಗೆ ಹಾನಿಯಾಗಿದ ಬಗ್ಗೆ ವೈದ್ಯಕೀಯ ವರದಿಯಲ್ಲಿ ಉಲ್ಲೇಖವಾಗಿದೆ.
ಪುತ್ತೂರಿನ ನರಿಮೊಗರು ನಿವಾಸಿ ಅವಿನಾಶ್ ಎಂಬುವವರ ಕೆನ್ನೆಗೆ ಪೊಲೀಸರು ಬಲವಾಗಿ ಹೊಡೆದಿದ್ದಾರೆ ಎನ್ನಲಾಗಿದ್ದು, ಇದರಿಂದ ಕಿವಿಯ ತಮಟೆ ಒಡೆದಿದೆ. ಕಿವಿಯ ತಮಟೆಗೆ ಹಾನಿಯಾಗಿರುವ ಬಗ್ಗೆ ಸ್ಕ್ಯಾನಿಂಗ್ ಫೋಟೊದಲ್ಲಿ ಉಲ್ಲೇಖವಾಗಿದೆ..

ವೈದ್ಯಕೀಯ ವರದಿ ಹೊರಬೀಳುತ್ತಿದ್ದಂತೆ ಎಸ್‌ಪಿ ವಿಕ್ರಂ ಅಮಾಟೆಯವರನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿಯಾಗಿದ್ದಾರೆ. ಅವಿನಾಶ್ ಕಿವಿಯ ತಮಟೆಗೆ ಹಾನಿಯಾಗಿರುವ ಬಗ್ಗೆ ಎಸ್‌ಪಿಗೆ ಮಾಹಿತಿ ತಿಳಿಸಿದ ಪುತ್ತಿಲ, ಈ ಕೂಡಲೇ ಇದಕ್ಕೆ ಕಾರಣಕರ್ತರಾದ ಡಿವೈಎಸ್‌ಪಿಯನ್ನು ಅಮಾನತು ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಜೊತೆಗೆ ಸಂತ್ರಸ್ತ ಯುವಕನಿಗೆ 5 ಲಕ್ಷ ಪರಿಹಾರ ನೀಡಬೇಕು. ಎರಡು ದಿನಗಳ ಒಳಗೆ ಇದಕ್ಕೆ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟದ ಎಚ್ಚರಿಕೆಯನ್ನು ಪುತ್ತಿಲ ನೀಡಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆಯುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಡಿವೈಎಸ್ಪಿ ಅಮಾನತಿಗೆ ಎಸ್ಪಿಯವರಲ್ಲಿ ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಮತ್ತು ಡಿವೈಎಸ್ಪಿ ವೀರಯ್ಯ ಹಿರೇಮಠ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಸದ್ಯ ಪುತ್ತೂರು ಡಿವೈಎಸ್ಪಿ ಹುದ್ದೆಗೆ ಪುತ್ತೂರಿನಲ್ಲಿ ಡಿವೈಎಸ್ಪಿಯಾಗಿ ಎರಡು ವರ್ಷ ಸೇವೆ ಸಲ್ಲಿಸಿದ ಅನುಭವ ಇರುವ ಗಾನಾ ಕುಮಾರಿ ಅವರನ್ನು ಪ್ರಭಾರಿಯಾಗಿ ಮರು ನೇಮಕ ಮಾಡಲಾಗಿದೆ.

ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರ ಆರೋಗ್ಯ ಪರಿಶೀಲನೆಗೆ ಮುಖಂಡರುಗಳು ಬಂದರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮತ್ತು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆಸ್ಪತ್ರೆಗೆ ಭೇಟಿ ನೀಡದೇ ಇರುವುದು ಕಾರ್ಯಕರ್ತರನ್ನು ಕೆರಳಿಸಿದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಆರೋಗ್ಯ ವಿಚಾರಿಸಲು ಬರದ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications