ಮಳಲಿ ಮಸೀದಿ ಮಣ್ಣನ್ನು ಗಣಯಾಗಕ್ಕೆ ಸಮರ್ಪಿಸಿದ ಹಿಂದೂ ಸಂಘಟನೆಗಳು, ಇಲ್ಲಿದೆ ವಿವರ
ಹಿಂದೂ ಸಂಘಟನೆಗಳು ಮಂಗಳೂರಿನ ಹೊರವಲಯದಲ್ಲಿರುವ ಮಳಲಿ ಮಸೀದಿ ಮಣ್ಣನ್ನು ಗಣಯಾಗಕ್ಕೆ ಸಮರ್ಪಿಸಿವೆ.
ಮಂಗಳೂರು, ಮಾರ್ಚ್, 16: ಮಂಗಳೂರು ನಗರದ ಹೊರವಲಯದಲ್ಲಿರುವ ಮಳಲಿ ಮಸೀದಿಯ ವಿವಾದ ಪ್ರಕರಣದ ಹಿನ್ನೆಲೆ, ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಹಿಂದೂ ಸಂಘಟನೆಗಳು ಇತ್ತೀಚೆಗೆ ಮಂದಿರ ನಿರ್ಮಾಣಕ್ಕೆ ಗಣಯಾಗ ನಡೆಸಿವೆ. ಮಳಲಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಈ ಗಣಯಾಗ ಪೂಜೆ ನೆರವೇರಿದೆ.
ದೇವಾಲಯ ಶೈಲಿಯ ಕಟ್ಟಡ ಪತ್ತೆ
ಕಳೆದ ವರ್ಷ ಮಳಲಿಯಲ್ಲಿರುವ ಜುಮ್ಮಾ ಮಸೀದಿಯ ನವೀಕರಣದ ವೇಳೆ ಹಿಂದೂ ದೇವಾಲಯ ಶೈಲಿಯ ಕಟ್ಟಡ ಪತ್ತೆಯಾಗಿತ್ತು. ಈ ವೇಳೆ ಹಿಂದೂ ಸಂಘಟನೆಗಳು ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಅಲ್ಲದೆ ಹಿಂದೂ ಸಂಘಟನೆಗಳಿಂದ ಮಳಲಿ ಮಸೀದಿ ಸಮೀಪದ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ 2022ರ ಮೇ ತಿಂಗಳಲ್ಲಿ ತಾಂಬೂಲ ಪ್ರಶ್ನಾ ಚಿಂತನೆಯನ್ನು ನೆರವೇರಿಸಲಾಗಿತ್ತು. ಈ ವೇಳೆ ವರ್ಷದ ಒಳಗೆ ಗಣಯಾಗ ನಡೆಸುವಂತೆ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿತ್ತು.

ಮಾರ್ಚ್ 14ರಂದು ಗಣಯಾಗ
ಅದರಂತೆಯೇ ಮಾರ್ಚ್ 14ರಂದು ಈ ಗಣಯಾಗ ನಡೆದಿತ್ತು. ಈ ಗಣಯಾಗದಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ, ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ. ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ಈ ಗಣಯಾಗಕ್ಕೆ ಮಳಲಿ ಮಸೀದಿ ಪ್ರದೇಶದ ಮಣ್ಣನ್ನು ಸಮರ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಗಣಯಾಗ ನಡೆಸುವ ವೇಳೆ ಗೌಪ್ಯತೆ ಕಾಪಾಡುವ ಹಿನ್ನೆಲೆಯಲ್ಲಿ ಹೆಚ್ಚು ಪ್ರಚಾರ ಮಾಡಲಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications