ಹಿಜಾಬ್ ನಿಷೇಧ ವಾಪಸ್ ಪಡೆದ್ರೆ ರಾಜ್ಯದ ಶಾಲಾ-ಕಾಲೇಜುಗಳು ಕೇಸರಿಮಯ- ವಿಎಚ್‌ಪಿ ಎಚ್ಚರಿಕೆ
ಮಂಗಳೂರು, ಡಿಸೆಂಬರ್ 23: ಬಿಜೆಪಿ ಸರಕಾರ ರದ್ದು ಮಾಡಿರುವ ಹಿಜಾಬ್ ಅನ್ನು ಮತ್ತೆ ಶಿಕ್ಷಣ ಸಂಸ್ಥೆಯೊಳಗೆ ತರತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಕೆಂಡಾಮಂಡಲವಾಗಿದ್ದಾರೆ.
ರಾಜ್ಯ ಸರ್ಕಾರದ ಈ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶರಣ್ ಪಂಪ್ ವೆಲ್, ಇಂತಹ ಕೆಲಸಕ್ಕೆ ರಾಜ್ಯ ಸರ್ಕಾರ ಕೈಹಾಕುವುದು ಬೇಡ. ಹಿಜಾಬ್ ರದ್ದತಿಯನ್ನು ವಾಪಸ್ ಪಡೆದದ್ದೇ ಆದಲ್ಲಿ ಕರ್ನಾಟಕದ ಎಲ್ಲಾ ಶಾಲಾ ಕಾಲೇಜುಗಳು ಕೇಸರಿಮಯವಾಗಲಿದೆ ಎಂಬ ಎಚ್ಚರಿಕೆ ನೀಡಿದರು.

ಈಗಾಗಲೇ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಬರಬೇಕಾದರೆ ಹಿಜಾಬ್, ಬುರ್ಖಾ ಧರಿಸಿ ಬರಲು ಅವಕಾಶ ಕೊಡುತ್ತೇವೆ. ಹಿಜಾಬ್ ಆದೇಶ ರದ್ದು ಮಾಡುತ್ತೇವೆ ಎಂಬ ಹೇಳಿಕೆ ಕೊಡುವ ಮೂಲಕ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಮತಾಂಧತೆಯ ವಿಷಬೀಜ ಬಿತ್ತುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಉಡುಪಿಯಲ್ಲಿ ಆರಂಭವಾದ ಹಿಜಾಬ್ ಗಲಭೆ ಇಡೀ ರಾಜ್ಯದಲ್ಲಿ ಸಾಕಷ್ಟು ಸಂಘರ್ಷ ಸೃಷ್ಟಿಸಿತ್ತು. ಕೇವಲ ಐದು ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಪ್ರತಿಭಟನೆ ನಡೆಸಿದ್ದಕ್ಕೆ ಪಿಎಫ್ಐ, ಎಸ್ ಡಿಪಿಐ ಬೆಂಬಲ ನೀಡಿತ್ತು. ಈ ಬೆಂಬಲದಿಂದಲೇ ಕರ್ನಾಟಕದಾದ್ಯಂತ ಘರ್ಷಣೆ ಸಂಭವಿಸಿತ್ತು. ಇದೀಗ ಪಿಎಫ್ಐ ಬ್ಯಾನ್ ಆದರೂ ಅವರ ಮಾನಸಿಕತೆ ಮುಂದುವರಿಯುತ್ತಿದೆ. ಪಿಎಫ್ಐಗೆ ಬೆಂಬಲ ಕೊಡುವ ಕಾರ್ಯವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಆದ್ದರಿಂದ ಪಿಎಫ್ಐ ಬದಲು ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ ಎಂಬ ಸಂಶಯ ಬಲವಾಗುತ್ತಿದೆ ಎಂದರು.
ಸಿದ್ದರಾಮಯ್ಯನವರು ಓಟಿಗಾಗಿ, ತುಷ್ಟೀಕರಣಕ್ಕಾಗಿ ಒಂದು ವರ್ಗದವರನ್ನು ಮೆಚ್ಚಿಸಲು ಹೊರಟಿದ್ದಾರೆ. ಇದು ಸರಿಯಲ್ಲ. ಆರಂಭದಲ್ಲಿ ಈ ಸರಕಾರ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದರು. ಆದರೆ ಈಗ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಾಕಲು ಹೊರಟಿದ್ದಾರೆ. ಆದ್ದರಿಂದ ಈ ಹಿಜಾಬ್ ರದ್ದತಿ ಆದೇಶ ವಾಪಸ್ ತೆಗೆದುಕೊಳ್ಳುವುದನ್ನು ಬಲವಾಗಿ ವಿರೋಧಿಸುತ್ತೇವೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಂಘರ್ಷವಾದಲ್ಲಿ ಅದಕ್ಕೆ ಕಾಂಗ್ರೆಸ್ ಸರಕಾರವೇ ನೇರ ಕಾರಣ ಎಂದು ಶರಣ್ ಪಂಪ್ ವೆಲ್ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಹಿಜಾಬ್ ನಿಷೇಧ ವಾಪಸ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?
ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್ ಬಗ್ಗೆ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ, ಹಿಜಾಬ್ ನಿಷೇಧವನ್ನು ವಾಪಸ್ ಪಡೆಯಲು ಸೂಚನೆ ನೀಡಿದ್ದೇನೆ. ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದ್ದೇನೆ. ಎಲ್ಲರೂ ಹಿಜಾಬ್ ಹಾಕಿಕೊಂಡು ಹೋಗಬಹುದು. ಆದೇಶ ಹಿಂಪಡೆಯಲು ಹೇಳಿದ್ದೇನೆ. ಡ್ರೆಸ್, ಊಟ ಮಾಡುವುದು ನಿಮಗೆ ಸೇರಿದ್ದು. ನಾನೇಕೆ ನಿಮಗೆ ಅಡ್ಡಿ ಪಡಿಸಲಿ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.












Click it and Unblock the Notifications