Heavy Rain: ಇಂದು ಕರಾವಳಿಯ ಹಲವು ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ
ಮಂಗಳೂರು, ಆಗಸ್ಟ್, 06: ಈಗಾಗಲೇ ಜುಲೈ ತಿಂಗಳಲ್ಲಿ ಕರಾವಳಿಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರೆಯುವ ಮೂಲಕ ದೊಡ್ಡ ದೊಡ್ಡ ಅನಾಹುತಗಳನ್ನೇ ಸೃಷ್ಟಿಸಿದ್ದ. ಬಳಿಕ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಕೊಂಚ ಮಳೆ ಕಡಿಮೆಯಾಗಿದ್ದು, ಇದೀಗ ಎರಡನೇ ವಾರ ಮತ್ತೇ ಬಿರುಸಾಗಿದೆ. ಇನ್ನು ಶನಿವಾರ ಈ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಇಂದು ಕೂಡ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶನಿವಾರ (ಆಗಸ್ಟ್ 05) ರಾಜ್ಯದ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಭಾನುವಾರವೂ (ಆಗಸ್ಟ್ 6) ಇದೇ ರೀತಿಯ ವಾತಾವರಣ ಮುಂದುವರೆಯುವ ಸಾಧ್ಯತೆಯಿದೆ. ಅದರಲ್ಲೂ ಕಾಸರಗೋಡು ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿದ್ದು, ಇಂದು ಇಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ತಿಳಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ, ಮಲೆನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳು, ಮತ್ತೊಂದೆಡೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆಯಿದೆ. ಹೀಗೆ ರಾಜ್ಯದ ಬಹುತೇಕ ಕಡೆ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ರವಾನಿಸಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ವಜಗೋಡ 141 ಮಿಲಿ ಮೀಟರ್, ದೊಡ್ಮನೆಯಲ್ಲಿ 79.5 ಮಿಲಿ ಮೀಟರ್, ಹಲಗೇರಿ 73 ಮಿಲಿ ಮೀಟರ್, ಇಟಗಿ 70 ಮಿಲಿ ಮೀಟರ್, ಕುಮಟಾದ ಸೊಪ್ಪಿನಹಳ್ಳಿಯಲ್ಲಿ 68 ಮಿಲಿ ಮೀಟರ್, ಅಂಕೋಲಾದ ಅಗಸೂರಿನಲ್ಲಿ 64.5 ಮಿಲಿ ಮೀಟರ್ ಮಳೆ ಬಿದ್ದಿದೆ.
ಹಾಗೆಯೆ ಹೊನ್ನಾವರದ ನಗರಬಸ್ತಿಕೇರಿಯಲ್ಲಿ 55.4 ಮಿಲಿ ಮೀಟರ್, ಸಿರಸಿಯ ಶಿವಳ್ಳಿಯಲ್ಲಿ 50 ಮಿ.ಮೀಟರ್, ಕುಮಟಾ ಹೆಗಡೆಯಲ್ಲಿ 49 ಮಿ.ಮೀಟರ್, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೆಳಂದೂರಿನಲ್ಲಿ 92.5 ಮಿಲಿ ಮೀಟರ್ ಮಳೆ ಸುರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸುಳ್ಯದ ಐವರ್ನಾಡಿನಲ್ಲಿ 79 ಮಿಲಿ.ಮೀಟರ್, ಬಂಟ್ವಾಳದ ಮಂಚಿಯಲ್ಲಿ 79 ಮಿಲಿ ಮೀಟರ್, ಬೆಳ್ತಂಗಡಿಯ ತೆಕ್ಕಾರಿನಲ್ಲಿ 78 ಮಿಲಿ ಮೀಟರ್, ಕೆದಂಬಾಡಿಯಲ್ಲಿ 71.5 ಮಿಲಿ ಮೀಟರ್, ಬಂಟ್ವಾಳದ ಇಡ್ಕಿದುವಿನಲ್ಲಿ 67.5 ಮಿಲಿ ಮೀಟರ್, ಕೊಡಿಯಾಲದಲ್ಲಿ 67 ಮಿಲಿ ಮೀಟರ್, ಕುಂದಾಪುರದ ಮಡಾಮಕ್ಕಿಯಲ್ಲಿ64.5 ಮಿಲಿ ಮೀಟರ್ ಮಳೆ ಬಿದ್ದಿದೆ ಎಂದು ತಿಳಿದುಬಂದಿದೆ.
ಒಟ್ಟನಲ್ಲಿ ಕರಾವಳಿ ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆಯಿಂದ ಈಗಾಗಲೇ ಅಪಾರ ಹಾನಿಯಾಗಿದೆ. ಇದೀಗ ಮತ್ತೆ ಈ ಭಾಗದಲ್ಲಿ ಮಳೆರಾಯನ ಆರ್ಭಟ ನಿಧಾನವಾಗಿ ಹೆಚ್ಚಾಗುತ್ತಲೇ ಇದ್ದು, ಇನ್ನು ಏನೆಲ್ಲಾ ಅನಾಹುತಗಳು ಸಂಭವಿಸುತ್ತವೆಯೋ ಎನ್ನುವ ಆತಂಕದಲ್ಲಿ ಇಲ್ಲಿನ ಜನರಿದ್ದಾರೆ.












Click it and Unblock the Notifications