ಫಲ್ಗುಣಿ ನದಿಯಿಂದ 10 ಲೋಡ್ ತ್ಯಾಜ್ಯ ಎತ್ತಿದ ಪರಿಸರ ಪ್ರೇಮಿಗಳು
ಮಂಗಳೂರು, ಜುಲೈ 15: ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಎಲ್ಲಾ ಜೀವನದಿಗಳು ಉಕ್ಕಿ ಹರಿದಿದೆ. ಹಲವು ನದಿಗಳು ಪಶ್ಚಿಮ ಘಟ್ಟದಿಂದ ಹುಟ್ಟಿ ಗ್ರಾಮೀಣ ಭಾಗದಲ್ಲಿ ಹರಿದು ಪಟ್ಟಣವನ್ನು ದಾಟಿ ಸಮುದ್ರ ಸೇರಿದರೆ ಮಂಗಳೂರಿನ ಫಲ್ಗುಣಿ ನದಿ ಮಾತ್ರ ನಗರದ ಹೊರವಲಯದಲ್ಲಿ ಹರಿದು, ನಗರದ ತ್ಯಾಜ್ಯ, ಕೈಗಾರಿಕೆಗಳ ವಿಷನೀರನ್ನು ಒಡಲೊಳಗೆ ತುಂಬಿ ಕಡಲು ಸೇರುತ್ತದೆ. ಹೀಗೆ ನಗರದ ತಾಜ್ಯ ತುಂಬಿ ಹರಿಯುವ ಫಲ್ಗುಣಿ ಮನುಷ್ಯನ ಕಾಲ್ಗುಣದಿಂದ ಎಷ್ಟು ತಾಜ್ಯ ತುಂಬಿದ್ದಾಳೆ ಅನ್ನೋದಕ್ಕೆ ಮಂಗಳೂರಿನ ಪರಿಸರ ಪ್ರೇಮಿಗಳಯ ಸಾಕ್ಷಿ ಸಮೇತ ಉದಾಹರಣೆ ನೀಡಿದ್ದಾರೆ.
ಭಾರೀ ಮಳೆಯ ಹಿನ್ನಲೆಯಲ್ಲಿ ಉಕ್ಕೇರಿದ ಮಂಗಳೂರು ನಗರದ ಫಲ್ಗುಣಿ ನದಿಯಲ್ಲಿ ರಾಶಿ ರಾಶಿ ತ್ಯಾಜ್ಯ ಜಮಾವಣೆಗೊಂಡಿದೆ. ನದಿಯ ಬದಿಯಲ್ಲಿ ಬಿದ್ದಿರುವ ಲೋಡುಗಟ್ಟಲೆ ಕಸದ ರಾಶಿಯನ್ನು ಕಂಡು ಪರಿಸರ ಪ್ರೇಮಿಗಳು ಶಾಕ್ ಗೊಳಗಾಗಿದ್ದಾರೆ. ಇಡೀ ದಿನ ಪರಿಸರ ಪ್ರೇಮಿಗಳ ಶ್ರಮದ ಪರಿಣಾಮ ಸುಮಾರು 10 ಲೋಡ್ ನಷ್ಟು ತ್ಯಾಜ್ಯ ಸಂಗ್ರಹವಾಗಿದೆ.
ನೆರೆಯಲ್ಲಿ ರೋಡು, ತೋಡು, ಜನವಸತಿ ಪ್ರದೇಶಗಳಿಂದ ಅಗಾಧ ಪ್ರಮಾಣದ ತ್ಯಾಜ್ಯ ನದಿಯೊಡಲು ಸೇರಿದೆ. ಇವುಗಳಲ್ಲಿ ಲೋಡುಗಟ್ಟಲೆ ಪ್ಯಾಂಪರ್ಸ್, ಪ್ಯಾಡ್, ಲಿಕ್ಕರ್ ಬಾಟಲಿಗಳು, ನೀರಿನ ಬಾಟಲಿಗಳು, ಇನ್ನಿತರ ಪ್ಲಾಸ್ಟಿಕ್ ಗಳು ಸೇರಿದಂತೆ ಅಗಾಧ ಪ್ರಮಾಣದ ತ್ಯಾಜ್ಯ ನಗರದ ಬಂಗ್ರ ಕೂಳೂರು ಪರಿಸರದ ಫಲ್ಗುಣಿ ನದಿ ತೀರದಲ್ಲಿ ಜಮಾವಣೆಯಾಗಿತ್ತು.

ಈ ತ್ಯಾಜ್ಯ ರಾಶಿಯನ್ನು ನದಿಯೊಡಲಿನಿಂದ ಮೇಲೆತ್ತಲು ಪರಿಸರ ಪ್ರೇಮಿ ಜೀತ್ ಮಿಲನ್ ರೋಶ್ ಅವರ ಮುಂದಾಳತ್ವದಲ್ಲಿ ಸ್ಕೂಲ್ ಆಫ್ ರೋಶನಿ ನಿಲಯ, ಸಿಒಡಿಪಿ ವಿದ್ಯಾರ್ಥಿಗಳ ಸಹಿತ 27 ಮಂದಿಯ ತಂಡ ಬೆಳಗ್ಗಿನಿಂದ ರಾತ್ರಿಯವರೆಗೆ ಶ್ರಮವಹಿಸಿದೆ. ಸ್ವಚ್ಚತಾ ಕಾರ್ಯ ಸಂಪೂರ್ಣವಾದ ಬಳಿಕ 4 ಲೋಡು ತ್ಯಾಜ್ಯವನ್ನು ಮರುಸಂಸ್ಕರಣಾ ಘಟಕಕ್ಕೆ ಸಾಗಿಸಲಾಗಿದೆ. ಆರು ಲೋಡು ಕಸವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್ ಗೆ ಕಳುಹಿಸಲಾಗಿದೆ.
ಸ್ವಚ್ಚತಾ ಕಾರ್ಯದ ಬಗ್ಗೆ ಮಾತನಾಡಿದ ಪರಿಸರ ಪ್ರೇಮಿ ಜಯಪ್ರಕಾಶ್ ಎಕ್ಕೂರು, "ವಿವಿಧ ತಂಡಗಳ ಜೊತೆ ಸೇರಿ ಆದಷ್ಟು ಸ್ವಚ್ಛ ಮಾಡಿದ್ದೇವೆ. ಸ್ವಚ್ಛತೆಯ ಜೊತೆಗೆ ಜನರಿಗೆ ಸಂದೇಶ ಹೋಗಲಿ ಎಂಬ ಮನೋಭಾವದಿಂದ ಮಾಡುತ್ತಿದ್ದೇವೆ. ಕಸವನ್ನು ಹೊರಗೆ ಅಥವಾ ನದಿ ಸಮುದ್ರಕ್ಕೆ ಎಸೆಯುವ ಬದಲು ಕಸದ ವಾಹನಕ್ಕೆ ಅಥವಾ ಸ್ವತಃ ವಿಲೇವಾರಿ ಮಾಡಿ ಅಂತಾ ಮನವಿ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.
ಸಿಪಿಡಿಪಿ ಸಂಸ್ಥೆಯ ಕಲಾಗಿರೀಶ್ ಮಾತನಾಡಿ, "ನದಿಯಲ್ಲಿ ಶೇಖರಣೆಯಾಗಿರುವ ಕಸ ಸ್ವಚ್ಛ ಮಾಡಲು ಕರೆ ಬಂದ ಹಿನ್ನಲೆಯಲ್ಲಿ ನಾವು ವಿದ್ಯಾರ್ಥಿಗಳ ಜೊತೆ ಬಂದಾಗ ಇಷ್ಟು ಪ್ರಮಾಣದ ಕಸ ನೋಡಿ ಆಶ್ಚರ್ಯವಾಗಿದೆ. ಬಾಟಲ್, ಪ್ಯಾಡ್, ಪ್ಯಾಂಪರ್ಸ್, ಪ್ಲಾಸ್ಟಿಕ್ ಗಳೇ ಅಧಿಕವಾಗಿದೆ. ಈ ತರ ಅನ್ಯಾಯ ಮಾಡುವಾಗ ನಾವು ಸ್ವಲ್ಪ ಯೋಚನೆ ಮಾಡಬೇಕು. ಪರಿಸರ ಹಾಳು ಮಾಡಿದರೆ ಮನುಷ್ಯನ ಅವನತಿ ಸನಿಹ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು" ಎಂದರು.
ಇನ್ನು ಈ ಸ್ವಚ್ಛತಾ ಕಾರ್ಯದ ನೇತೃತ್ವ ವಹಿಸಿದ ಜೀತ್ ಮಿಲನ್ ರೋಶ್ ಮಾತನಾಡಿ, "ಒಟ್ಟು ಹತ್ತು ಲೋಡ್ ಕಸವನ್ನು ತೆಗೆದಿದ್ದೇವೆ. ಅದರಲ್ಲಿ ಎರಡು ಲೋಡ್ ಕಸವನ್ನು ರಿಸೈಕಲ್ ಮಾಡಲು ಕಳುಹಿಸಿದ್ದೇವೆ. ಒಂದು ಲೋಡ್ ಮಧ್ಯದ ಬಾಟಲ್, ಪ್ಯಾಡ್ , ಪ್ಯಾಂಪರ್ಸ್ ಗಳು ಸಿಕ್ಕಿದೆ. ಅದನ್ನೆಲ್ಲಾ ನದಿಯಿಂದ ತಗೆಯೋಕೆ ಬಹಳ ಕಷ್ಟಪಟ್ಟಿದ್ದೇವೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ ಒಂಭತ್ತು ಗಂಟೆ ತನಕ ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದೇವೆ" ಎಂದು ವಿವರಿಸಿದರು.












Click it and Unblock the Notifications