• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಳದಂಗಡಿ ಸತ್ಯದೇವತೆಯ ದರ್ಶನ ಪಡೆದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 3: ಸದ್ಯ ಕರಾವಳಿ ಪ್ರವಾಸದಲ್ಲಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ದಕ್ಷಿಣ ಕನ್ನಡ ಜಿಲ್ಲೆಯ ಕಾರಣಿಕ ಶಕ್ತಿಯ ದರ್ಶನ ಪಡೆದಿದ್ದಾರೆ. ಧರ್ಮಸ್ಥಳದಿಂದ ಉಡುಪಿಗೆ ಪ್ರಯಾಣಿಸುವ ವೇಳೆ, ಅಳದಂಗಡಿಯ ಸತ್ಯದೇವತೆಯ ದರ್ಶನ ಮಾಡಿದ್ದು, ಈ ಮೂಲಕ ಕಾರಣಿಕ ಶಕ್ತಿಯ ದರ್ಶನ ಮಾಡಿದ ಗಣ್ಯರ ಪಾಲಿಗೆ ರಾಜ್ಯಪಾಲರೂ ಸೇರಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿದ ಬಳಿಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉಡುಪಿಗೆ ತೆರಳಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮನವಿಯಂತೆ, ರಾಜ್ಯಪಾಲರು ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿ, ದೈವದ ಕೋಲ ಸೇವೆಯಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದಾರೆ.

ಈ ಸಂದರ್ಭದಲ್ಲಿ ಅಜಿಲ ಸೀಮೆಯ ತಿಮ್ಮಣ್ಣರಸರಾದ ಪದ್ಮ ಪ್ರಸಾದ್ ಅಜಿಲ, ಶಾಸಕ ಹರೀಶ್ ಪೂಂಜಾ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದಾರೆ. ಈ ವೇಳೆ ಅಜಿಲ ಸೀಮೆಯ ಅರಸರಾದ ಪದ್ಮ ಪ್ರಸಾದ್ ಅಜಿಲ, ಸತ್ಯದೇವತೆ ಕಲ್ಲುರ್ಟಿ ದೈವದ ಮಹಿಮೆ, ಜನರ ನಂಬಿಕೆ ಮತ್ತು ಇಷ್ಟಾರ್ಥ ಸಿದ್ಧಿಯಾದ ಬಗ್ಗೆ ರಾಜ್ಯಪಾಲರಿಗೆ ವಿವರಿಸಿದ್ದಾರೆ.‌ ರಾಜ್ಯಪಾಲರು ಕರಾವಳಿ ಶಕ್ತಿಯ ಪ್ರಥಮ ದರ್ಶನ ಮಾಡಿದ್ದರಿಂದ, ರಾಜ್ಯಪಾಲರೂ ಕುತೂಹಲಭರಿತರಾಗಿ ದೈವದ ಕೋಲದಲ್ಲಿ ಭಾಗಿಯಾಗಿದ್ದಾರೆ.

 ಬೆಳ್ತಂಗಡಿಯಿಂದ 13 ಕಿಮೀ ದೂರದಲ್ಲಿ ಅಳದಂಗಡಿ

ಬೆಳ್ತಂಗಡಿಯಿಂದ 13 ಕಿಮೀ ದೂರದಲ್ಲಿ ಅಳದಂಗಡಿ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನಿಂದ 13 ಕಿಮೀ ದೂರದಲ್ಲಿ ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನವಿದೆ. ಕಾರಣಿಕ ಶಕ್ತಿಯಿಂದೇ ಪ್ರಸಿದ್ಧಿ ಪಡೆದ ಈ ದೈವ ಕರ್ನಾಟಕದ ಹಲವು ಖ್ಯಾತನಾಮರ ಇಷ್ಟಾರ್ಥ ಸಿದ್ಧಿ ಮಾಡಿ, ಕಷ್ಟಗಳನ್ನು ದೂರ ಮಾಡಿದೆ. ನಟ ದರ್ಶನ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದಿ. ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ಖ್ಯಾತನಾಮರೂ ಈ ಹಿಂದೆ ಕಷ್ಟ ಬಂದಾಗ ಅಳದಂಗಡಿ ಸತ್ಯದೇವತೆಯ ಬಳಿ ಶರಣಾಗಿದ್ದರು. ಕಲ್ಲುರ್ಟಿ ದೈವಕ್ಕೆ ಕೋಲ ಸೇವೆಯನ್ನು ಒಪ್ಪಿಸಿ ಹರಕೆ ತೀರಿಸಿಕೊಂಡಿದ್ದರು.

ನಟ ದರ್ಶನ್ ಕರಾವಳಿ ಪ್ರವಾಸದ ವೇಳೆಯಲ್ಲಿ ಈ ದೈವಸ್ಥಾನಕ್ಕೆ ಬಂದು ಪ್ರಾರ್ಥನೆ ಮಾಡಿ ಹೋಗುತ್ತಾರೆ. ಕೌಟುಂಬಿಕ ಸಮಸ್ಯೆಯ ಸಂದರ್ಭದಲ್ಲಿ, ಸಾರಥಿ ಚಲನಚಿತ್ರದ ಯಶಸ್ಸಿನ ವೇಳೆ ಅಳದಂಗಡಿಯ ಸತ್ಯದೇವತೆ ಕಲ್ಲುರ್ಟಿಯ ದರ್ಶನ ಮಾಡಿ ಹೋಗಿರುವುದು ಕೂಡಾ ದರ್ಶನ್ ನಂಬಿಕೆಗೆ ಉದಾಹರಣೆಯಾಗಿದೆ.

 ದೇವಸ್ಥಾನ‌ 800 ವರ್ಷಗಳ‌ ಇತಿಹಾಸ ಹೊಂದಿದೆ

ದೇವಸ್ಥಾನ‌ 800 ವರ್ಷಗಳ‌ ಇತಿಹಾಸ ಹೊಂದಿದೆ

ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೇವಸ್ಥಾನ‌ 800 ವರ್ಷಗಳ‌ ಇತಿಹಾಸ ಹೊಂದಿದೆ. ತುಳುವಿನ ಪಾಡ್ದನಗಳ ಹಿನ್ನಲೆಯ ಪ್ರಕಾರ ತುಳುನಾಡಿನ ಗೊಮ್ಮಟೇಶ್ವರನಂತಹ ಶಿಲ್ಪಕಲೆಗಳನ್ನು ಕೆತ್ತಿಸಿದವರು ಕಲ್ಕುಡ ಮತ್ತು ಆತನ ತಂಗಿ ಕಲ್ಲುರ್ಟಿ. ಅಳದಂಗಡಿ ಸತ್ಯದೇವತೆಗೆ ಮುನ್ನೂರು ವರ್ಷಗಳಿಂದ ಹರಕೆಯ ಕೋಲ ನಡೆಯುತಿತ್ತು ಎನ್ನುವ ಇತಿಹಾಸವಿದೆ. ಮೊದಮೊದಲು ಇಷ್ಟಾರ್ಥ ಸಿದ್ಧಿಗಾಗಿ ವರ್ಷದಲ್ಲಿ ಐದಾರು ಹರಕೆಯ ಕೋಲಗಳು ನಡೆಯುತಿತ್ತು. ಆದರೆ ಈಗ ವರ್ಷದಲ್ಲಿ 300 ಹರಕೆಯ ಕೋಲಗಳು ನಡೆಯುತ್ತವೆ. ಈ ಹಿಂದೆ ಕಟ್ಟೂರು ಎಂಬಲ್ಲಿ ಈ ದೈವಸ್ಥಾನವಿತ್ತು. ಬಳಿಕ 1987ರಲ್ಲಿ ಕಾರ್ಕಳ- ಬೆಳ್ತಂಗಡಿಯ ಮಾರ್ಗಮಧ್ಯೆ ಅಳದಂಗಡಿ ಎಂಬಲ್ಲಿ ಸತ್ಯದೇವತೆಯ ನೂತನ ದೈವಸ್ಥಾನ ನಿರ್ಮಾಣವಾಗಿದೆ.

ಕಾರಣಿಕ ಶಕ್ತಿಯಲ್ಲಿ ಹರಕೆ ಒಪ್ಪಿಕೊಂಡರೆ ಅತೀ ಶೀಘ್ರವಾಗಿ ಬೇಡಿಕೆಗಳೆಲ್ಲಾ ಈಡೇರುತ್ತದೆ. ಹರಕೆಯ ರೂಪದಲ್ಲಿ ಭಕ್ತರು ಕಲ್ಲುರ್ಟಿಗೆ ಹರಕೆ ಸೇವೆ ಒಪ್ಪಿಸುತ್ತಾರೆ. ಸತ್ಯದೇವತೆಯ ಕಾರಣಿಕ ಶಕ್ತಿಗೆ ಕಳೆದ ಹತ್ತು ವರ್ಷಗಳಲ್ಲಿ ಮೂವತ್ತು ಸಾವಿರಕ್ಕಿಂತಲೂ ಅಧಿಕ ಹರಕೆಯ ಕೋಲ ಸೇವೆ ಆಗಿರುವುದೇ ಸಾಕ್ಷಿ. ಸತ್ಯದೇವತೆಯ ಕಾರಣಿಕದಿಂದ ಹಲವು ಕ್ಲಿಷ್ಟ ಸಮಸ್ಯೆಗಳು ನಿವಾರಣೆಯಾದ ಉದಾಹರಣೆಗಳಿವೆ.

 ಮದುವೆಯ ಭಾಗ್ಯ ಲಭಿಸಿದ್ದಿದೆ

ಮದುವೆಯ ಭಾಗ್ಯ ಲಭಿಸಿದ್ದಿದೆ

ಮಕ್ಕಳಾಗದವರಿಗೆ ಸಂತಾನ ಭಾಗ್ಯ ಕೈಗೂಡಿರುವುದು. ಕಳುವಾದ ವಸ್ತುವಿನ ಶೋಧನೆ ಪೊಲೀಸರಿಂದಲೂ ಆಗದೆ ಹೋದದ್ದು, ದೈವದ ಹರಕೆಯಿಂದಾಗಿ ಮರಳಿ ಮನೆಗೆ ಬಂದದೆ. ಕೋರ್ಟ್‌ನಲ್ಲಿರುವ ದಾವೆಯಲ್ಲಿ ನ್ಯಾಯ ತಮ್ಮ ಪಾಲಿಗೆ ಆದದ್ದು, ಕೌಟುಂಬಿಕ ವಿವಾದಗಳು ಬಗೆಹರಿದದ್ದು, ಮದುವೆಯ ಭಾಗ್ಯ ಲಭಿಸಿದ್ದು ಇಂತಹ ಇಷ್ಟಾರ್ಥಗಳ ಸಿದ್ಧಿಯಾದ ಬಗೆಗೆ ಕೋಲ ಸೇವೆ ನಡೆಯುತ್ತದೆ. ದಿನದಲ್ಲಿ ಸರಾಸರಿ ಎರಡು ಕೋಲಗಳನ್ನು ಮಾತ್ರ ಮಾಡುವುದೆಂಬ ನಿಯಮವಿರಿಸಿಕೊಂಡಿದ್ದರೂ ಅಗತ್ಯ ಸಂದರ್ಭಗಳಲ್ಲಿ ಒಂದೇ ದಿನ ಮೂರು ಕೋಲಗಳೂ ನಡೆಯುತ್ತವೆ. ಕೋಲ ನಡೆಸಲು ತಿಂಗಳುಗಳ ಮೊದಲೇ ಕಾಯ್ದಿರಿಸಬೇಕಾಗುತ್ತದೆ.

 ಅಜಿಲ ವಂಶದ ರಾಜರ ಆಳ್ವಿಕೆಯಲ್ಲಿ ದೇವಸ್ಥಾನ ನಿರ್ಮಣ

ಅಜಿಲ ವಂಶದ ರಾಜರ ಆಳ್ವಿಕೆಯಲ್ಲಿ ದೇವಸ್ಥಾನ ನಿರ್ಮಣ

ಸತ್ಯದೇವತೆಯ ಗುಡಿಯ ಪಕ್ಕದಲ್ಲೇ 800 ವರ್ಷಗಳ ಹಿಂದಿನ ಇತಿಹಾಸ ಪ್ರಸಿದ್ಧವಾದ ಸೋಮನಾಥೇಶ್ವರಿಯ ದೇವಾಲಯವಿದೆ. ಇದು ಅಜಿಲ ಸೀಮೆಗೆ ಒಳಪಡುತ್ತದೆ. ತಿಮ್ಮಣ್ಣರಸರಾದ ಅಜಿಲ ವಂಶದ ರಾಜರ ಆಳ್ವಿಕೆಯಲ್ಲಿ ಈ ದೈವಸ್ಥಾನದ ಸಮೃದ್ಧಿಯನ್ನು ಕಂಡಿತ್ತು.

ಸತ್ಯದೇವತೆ ಕಲ್ಲುರ್ಟಿ ದೈವಕ್ಕೆ ಜಾತಿ-ಮತ, ಭೇದ ಮೀರಿದ ಭಕ್ತರಿದ್ದಾರೆ. ಹಿಂದೂಗಳು ಮಾತ್ರವಲ್ಲದೇ ಕ್ರಿಶ್ಚಿಯನ್, ಮುಸ್ಲಿಂ ಭಕ್ತರನ್ನೂ ಈ ಕ್ಷೇತ್ರ ಒಳಗೊಂಡಿದೆ. ಅನ್ಯಧರ್ಮದವರೂ ಈ ಕ್ಷೇತ್ರದಲ್ಲಿ ಹರಕೆ ಹೇಳಿ ಇಷ್ಟಾರ್ಥ ಸಿದ್ಧಿಸಿಕೊಂಡಿದ್ದಾರೆ. ಗುಡಿಯ ಸುತ್ತಣ ಗೋಪುರ ಇತ್ಯಾದಿಗಳನ್ನು ಕೋರಿಕೆ ಸಿದ್ಧಿಸಿಕೊಂಡವರೇ ನಿರ್ಮಿಸಿ ಕೊಟ್ಟಿದ್ದಾರೆ.

   HDD ಹತ್ರ ಸಹಾಯ ಹಸ್ತ ಚಾಚಿದ ಬಿಜೆಪಿಗರು !! | Oneindia Kannada
   English summary
   Governor Thawarchand Gehlot has Recieved a Aladangadi Sathya Devate Darshana in Dakshina Kannada district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X