ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂತ್ರಸ್ತನಿಗೆ ಸರ್ಕಾರದಿಂದ ಪರಿಹಾರ ವಿತರಣೆ
ಮಂಗಳೂರು, ಜನವರಿ 17: ಕುಕ್ಕರ್ ಬಾಂಬ್ ಬ್ಲಾಸ್ಟ್‌ನಿಂದ ಗಾಯಾಳುವಾಗಿದ್ದ ರಿಕ್ಷಾ ಡ್ರೈವರ್ ಪುರುಷೋತ್ತಮ ಪೂಜಾರಿಯವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಖಾತೆಗೆ ಜನವರಿ 1ರಂದು ಸಿಎಂ ಪರಿಹಾರ ನಿಧಿಯಿಂದ ಬಿಡುಗಡೆಯಾದ ಈ ಪರಿಹಾರ ಮೊತ್ತದ ಚೆಕ್ ಅನ್ನು ಪುರುಷೋತ್ತಮ ಪೂಜಗೆ ವಿತರಣೆ ಮಾಡಲಾಗಿದೆ.
ಪರಿಹಾರ ಚೆಕ್ ವಿತರಣೆ ಉದ್ದೇಶದಿಂದ ಸಿಎಂ ಪರಿಹಾರ ನಿಧಿಯಿಂದ ಸಿಎಂ ಜಂಟಿ ಕಾರ್ಯದರ್ಶಿ ಪಿ. ಗೋಪಾಲ್ ಆದೇಶ ಹೊರಡಿಸಿದ್ದಾರೆ. ಆದರೆ ಈ ಆದೇಶದಲ್ಲಿ ಕುಕ್ಕರ್ ಬಾಂಬ್ ಪ್ರಕರಣವನ್ನು ಸಾಮಾನ್ಯ ಘಟನೆಯೆಂಬಂತೆ ಬಿಂಬಿಸಲಾಗಿದೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್ ಭಯೋತ್ಪಾದಕ ಕೃತ್ಯ ಎಸಗಿರುವುದನ್ನು ಒಪ್ಪಿದ್ದಾನೆ.

ಎನ್ಐಎ ಕೂಡಾ ಈತನ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಆದರೂ ಆದೇಶ ಪತ್ರದಲ್ಲಿ ಮೊಹಮ್ಮದ್ ಶಾರೀಕ್ ನನ್ನು ಸಾಮಾನ್ಯ ಪ್ರಯಾಣಿಕನಂತೆ ಬಿಂಬಿಸಲಾಗಿದೆ. ಕುಕ್ಕರ್ ಬಾಂಬ್ ಎಂದು ಬಿಂಬಸದೆ ಸಾಮಾನ್ಯ ಕುಕ್ಕರ್ ಸಿಡಿದಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಕುಕ್ಕರ್ ಬಾಂಬ್ ಪ್ರಕರಣವನ್ನೇ ರಾಜ್ಯ ಸರ್ಕಾರ ಸಾಮಾನ್ಯ ಘಟನೆಯೆಂಬಂತೆ ಬಿಂಬಿಸಲು ಹೊರಟಂತಿದೆ ಎನ್ನುವ ಅಸಮಾಧಾನದ ಮಾತುಗಳು ಕೇಳಿ ಬಂದಿದೆ.
ಪುರುಷೋತ್ತಮ ಪೂಜಾರಿಯವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ನೀಡುವಂತೆ ಐವಾನ್ ಡಿಸೋಜ ಅವರು ಸಿಎಂ ಸಿದ್ದರಾಮಯ್ಯರಿಗೆ ಮನವಿ ನೀಡಿದ್ದರು. ಅದನ್ನು ಪರಿಗಣಿಸಿ ಸಿದ್ದರಾಮಯ್ಯ ಎರಡು ಲಕ್ಷ ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ.
ಈ ಹಿಂದಿನ ಬಿಜೆಪಿ ಸರಕಾರದಿಂದ ಅವರಿಗೆ ಪರಿಹಾರದ ಮೊತ್ತ ಲಭಿಸಿರಲಿಲ್ಲ. ಶಾಸಕ ವೇದವ್ಯಾಸ ಕಾಮತ್ ತಮ್ಮ ವೈಯುಕ್ತಿಕ ಹಣದಿಂದ ಹೊಸದಾದ ಆಟೋ ರಿಕ್ಷಾ ಒದಗಿಸಿದ್ದರೆ, ಬಿಜೆಪಿ ಪಕ್ಷದಿಂದ ಐದು ಲಕ್ಷ ರೂಪಾಯಿ ನೆರವು ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರದಿಂದ ಪರಿಹಾರ ಮೊತ್ತ ಸಿಕ್ಕಿರಲಿಲ್ಲ. ಅವರ ಚಿಕಿತ್ಸಾ ವೆಚ್ಚವನ್ನೂ ಭರಿಸಿರಲಿಲ್ಲ.
ಪ್ರಕರಣದ ಹಿನ್ನೆಲೆ ಏನು?
2022 ನವೆಂಬರ್ 19ರಂದು ನಗರದ ನಾಗುರಿಯ ಗರೋಡಿ ಬಳಿ ಸಂಚಾರದಲ್ಲಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಪಡೀಲ್‌ನಲ್ಲಿ ರಿಕ್ಷಾ ಹತ್ತಿದ್ದ ಶಂಕಿತ ಉಗ್ರ ಶಾರೀಕ್ ಬಳಿಯಿದ್ದ ಕುಕ್ಕರ್ ಬಾಂಬ್ ನಾಗುರಿ ಬಳಿ ಆಕಸ್ಮಿಕವಾಗಿ ಸ್ಪೋಟಗೊಂಡಿತ್ತು. ಇದರಿಂದ ಶಾರೀಕ್ ಹಾಗೂ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರು ಗಾಯಗೊಂಡಿದ್ದರು. ಈ ಇಬ್ಬರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರಿಕ್ಷಾ ಚಾಲಕ ಗುಣಮುಖರಾಗಿ ಮನೆಗೆ ಮರಳಿದ್ದರು. ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು.












Click it and Unblock the Notifications