ಮಂಗಳೂರು: ಪರೀಕ್ಷೆ ಮುಗಿಸಿ ಹೋದ ನಾಲ್ವರು SSLC ವಿದ್ಯಾರ್ಥಿಗಳು ಶವವಾಗಿ ಪತ್ತೆ
ಮಂಗಳೂರು, ಫೆಬ್ರವರಿ 28: ಪರೀಕ್ಷೆ ಮುಗಿಸಿ ಶಾಲೆಯಿಂದ ತೆರಳಿದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಎಂಬಲ್ಲಿ ನಡೆದಿದೆ. ಮಂಗಳೂರಿನ ಸುರತ್ಕಲ್ನ ವಿದ್ಯಾದಾಯಿನಿ ಶಾಲೆಯಲ್ಲಿ ಹತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಹಳೆಯಂಗಡಿ ತೋಕೂರು ನಿವಾಸಿ ವಸಂತ ಅವರ ಪುತ್ರ ರಾಘವೇಂದ್ರ (15), ಚಿತ್ರಾಪುರ ನಿವಾಸಿ ದೇವದಾಸ ಅವರ ಪುತ್ರ ಅನ್ವಿತ್( 15), ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಅವರ ಮಗ ಯಶ್ವಿತ್ (15) ಹಾಗೂ ಸುರತ್ಕಲ್ ಗೊಡ್ಡೆಕೊಪ್ಲ ನಿವಾಸಿ ವಿಶ್ವನಾಥ ಅವರ ಮಗ ನಿರೂಪ್ (15) ಮೃತ ದುರ್ದೈವಿಗಳು.

ವಿದ್ಯಾದಾಯಿನಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ರಾಘವೇಂದ್ರ, ಅನ್ವಿತ್, ಯಶ್ವಿತ್, ಹಾಗೂ ನಿರೂಪ್ ನಿನ್ನೆ( ಫೆಬ್ರವರಿ 27) ಮಂಗಳವಾರ ಪರೀಕ್ಷೆ ಮುಗಿಸಿ ಶಾಲೆಯಿಂದ ಮನೆಗೆ ತೆರಳದೇ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಿನ್ನೆಯಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳಿಗಾಗಿ ನಿರಂತರ ಹುಡುಕಾಟ ನಡೆಸಲಾಗಿದ್ದು, ಇಂದು ಹಳೆಯಂಗಡಿ ರೈಲ್ವೇ ಸೇತುವೆ ಕೆಳಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪರೀಕ್ಷೆ ಮುಗಿಸಿದ ನಾಲ್ವರು ಹಳೆಯಂಗಡಿ ನದಿ ಈಜಾಡಲು ತೆರಳಿದ್ದಾರೆ. ಹಳೆಯಂಗಡಿ ನದಿ ಬಳಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್, ಸಮವಸ್ತ್ರ ಪತ್ತೆಯಾಗಿತ್ತು. ಪೊಲೀಸರು ಈ ಭಾಗದಲ್ಲೇ ನಿರಂತರ ಹುಡುಕಾಟ ನಡೆಸಿದ್ದು, ನಾಲ್ವರ ಶವ ಪತ್ತೆಯಾಗಿದೆ.
ನಾಲ್ವರು ವಿದ್ಯಾರ್ಥಿಗಳ ಸಾವಿನ ಪ್ರಕರಣ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳು ನದಿಯಲ್ಲಿ ಈಜಾಡಲು ಹೋಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications