Mangaluru Rain: ಮಹಾ ಮಳೆಗೆ ಭಾರೀ ದುರಂತ: ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು
ಮಂಗಳೂರು, ಜೂನ್ 26: ಮನೆಯ ಗೋಡೆ ಕುಸಿದು ಬಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರು ಮದನಿ ನಗರದಲ್ಲಿ ನಡೆದಿದೆ. ಯಾಸಿರ್(45), ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸತತ ಮಳೆಯಿಂದ ಕುತ್ತಾರು ಮದನಿ ನಗರದ ಅಬೂಬಕ್ಕರ್ ಎನ್ನುವವರಿಗೆ ಸಂಬಂಧಿಸಿದ ಮನೆಯ ಗೋಡೆ ಕುಸಿದಿದ್ದು, ಯಾಸಿರ್ ಅವರ ಮನೆಯ ಗೋಡೆಗೆ ಬಿದ್ದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ನಾಲ್ವರ ಮೇಲೆಯೂ ಗೋಡೆ ಉರುಳಿ ಬಿದ್ದಿದ್ದರು, ನಾಲ್ಕು ಜನರು ಮಲಗಿದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಮೂವರ ಮೃತದೇಹಗಳನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಮತ್ತೊಬ್ಬ ಬಾಲಕಿ ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರಿದಿದ್ದು, ಗೋಡೆಯ ಕೆಳಗೆ ಸಿಕ್ಕ ಮೃತದೇಹ ತೆಗೆಯಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಾಲೆಯ ತಡೆಗೋಡೆ ಕುಸಿದು ವಿದ್ಯಾರ್ಥಿನಿ ದಾರುಣ ಸಾವು
ಈ ಬಾರಿ ಮಳೆಯ ಅವಾಂತರದಿಂದ ಸಾಲು ಸಾಲು ಸಾವು ಸಂಭವಿಸುತ್ತಿದ್ದು, ಶಾಲೆಯ ತಡೆಗೋಡೆ ಕುಸಿದು ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನ್ಯೂಪಡ್ಪು ಶಾಲೆಯಲ್ಲಿ ಇತ್ತೀಚಿಗೆ ನಡೆದಿದೆ. ನ್ಯೂಪಡ್ಪು ನಿವಾಸಿ ಸಿದ್ದೀಖ್ ಜಮೀಲಾ ಪುತ್ರಿ ಶಾಜಿಯಾ (7) ಮೃತ ಬಾಲಕಿ ಎಂದು ಗುರುತಿಸಲಾಗಿದೆ.

ನ್ಯೂಪಡ್ಪು ಹಾಜಬ್ಬರ ಶಾಲೆಯಲ್ಲಿ 3ನೇ ತರಗತಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಶಾಜಿಯಾ ಶಾಲೆಯಲ್ಲಿ ನಡೆಯುತ್ತಿದ್ದ ಎನ್‌ಎಸ್ಎಸ್ ಶಿಬಿರದಲ್ಲಿ ಭಾಗಿಯಾಗಿದ್ದಳು. ಇಂದು ಗೇಟಿನ ಬಳಿ ಆಟವಾಡುತ್ತಿರುವಾಗ, ಮಳೆಗೆ ನೆನೆದಿದ್ದ ಶಾಲೆಯ ತಡೆಗೋಡೆ ಏಕಾಏಕಿ ಕುಸಿದಿದ್ದು, ಬಾಲಕಿ ತಡೆಗೋಡೆಯ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾಳೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಕಟ್ಟಿದ ನ್ಯೂಪಡ್ಪು ಶಾಲೆಯಲ್ಲಿ ಈ ದುರಂತ ನಡೆದಿತ್ತು.












Click it and Unblock the Notifications