Breaking: ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಮಂಗಳೂರು, ಡಿಸೆಂಬರ್ 8: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ನಗರದ ರ್ಮೋರ್ಗನ್ಸ್ ಗೇಟ್ ಬಳಿಯ ಮೋರ್ಗನ್‌ಸ್ಟ್ರೀಟ್ ಎಂಬಲ್ಲಿ ಬುಧವಾರ ನಡೆದಿದೆ. ಮೃತರನ್ನು ನಾಗೇಶ್ ಶೇರಿಗುಪ್ಪಿ, ಅವರ ಪತ್ನಿ ವಿಜಯಲಕ್ಷ್ಮೀ(26), ಮಕ್ಕಳಾದ ಸ್ವಪ್ನಾ(8) ಮತ್ತು ಸಮರ್ಥ್(4) ಎಂದು ಗುರುತಿಸಲಾಗಿದೆ.
ಇವರು ಮೂಲತಃ ಬಾಗಲಕೋಟೆ ಜಿಲ್ಲೆ ಬೀಳಗಿಯ ಸುನಗ್ ಗ್ರಾಮದ ಬೀಳಗಿ ನಿವಾಸಿಗಳಾಗಿದ್ದಾರೆ. ವಿಜಯಲಕ್ಷ್ಮೀ ಮತ್ತು ಇಬ್ಬರು ಮಕ್ಕಳು ವಿಷ ಸೇವನೆ ಮಾಡಿ ಮೃತಪಟ್ಟ ಸ್ಥಿತಿಯಲ್ಲಿದ್ದರೆ, ನಾಗೇಶ್ ಮೃತದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಗೇಶ್ ಚಾಲಕರಾಗಿ ದುಡಿಯುತ್ತಿದ್ದು, ವಿಜಯಲಕ್ಷ್ಮೀ ಸೆಕ್ಯೂರಿಟಿಯಾಗಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "ನಾಗೇಶ್ ಎಂಬುವರು ಬರೆದಿದ್ದೆನ್ನಲಾದ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದಂತೆ ನೂರ್ ಜಹಾನ್ ಎಂಬ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ತನ್ನ ಪತ್ನಿ ವಿಜಯಲಕ್ಷ್ಮೀ ನೂರ್ ಜಹಾನ್ ಎಂಬಾಕೆಯ ಜೊತೆ ಹೆಚ್ಚು ಸಂಪರ್ಕದಲ್ಲಿದ್ದಳು. ಅಲ್ಲದೆ ಮತಾಂತರ ಪ್ರಯತ್ನ ನಡೆದಿತ್ತು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ," ಎಂದು ಹೇಳಿದ್ದಾರೆ.

"ನಾಗೇಶ್ ಮತ್ತು ವಿಜಯಲಕ್ಷ್ಮೀ ಜೊತೆ ಆಗಾಗ ಜಗಳವಾಗುತ್ತಿದ್ದು, ಈ ಹಿಂದೆ ವಿಜಯಲಕ್ಷ್ಮಿ ಮನೆ ಬಿಟ್ಟು ಹೋಗಿದ್ದರು. ಈ ಕುರಿತಂತೆ ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಇಬ್ಬರನ್ನು ಕರೆಸಿ ಬುದ್ಧಿ ಹೇಳಿ ಕಳುಹಿಸಲಾಗಿತ್ತು. ಇದೀಗ ಈ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ," ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.












Click it and Unblock the Notifications