ಸಿನಿಮಾದವರು ಗೆದ್ದು ಸಿಎಂ ಆಗಿದ್ದಾರೆ: ಸಿಎಂ ಹೇಳಿಕೆಗೆ ನಟಿ ತಾರಾ ತಿರುಗೇಟು
ಮಂಗಳೂರು, ಏಪ್ರಿಲ್ 04:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಿರುಸುಗೊಂಡಿದೆ.ಗುರುವಾರ (ಏ.04) ಬಿಜೆಪಿ ನಾಯಕಿ, ಚಿತ್ರ ನಟಿ ತಾರಾ ನಳಿನ್ ಕುಮಾರ್ ಕಟೀಲ್ ಪರ ಮಂಗಳೂರಿನಲ್ಲಿ ಮತಯಾಚನೆ ಮಾಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯಿರುವ ಮೀನು ಮಾರುಕಟ್ಟೆಯಲ್ಲಿ ಪ್ರಚಾರ ನಡೆಸಿದ ತಾರಾ ಮೀನು ಮಾರುವ ಮಹಿಳೆಯರ ಬಳಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿತ್ರನಟರ ಪ್ರಚಾರಕ್ಕೆ ಮತ ಬರಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ಚಿತ್ರನಟರೇನು ಬೇರೆ ಗ್ರಹದಿಂದ ಬಂದವರಲ್ಲ . ಚಿತ್ರ ಕಲಾವಿದರೂ ಇದೇ ಸಮಾಜದಿಂದ ಬೆಳೆದು ಬಂದವರು. ಕುಮಾರಸ್ವಾಮಿ ಅವರ ಮಗ ನಿಖಿಲ್ ಕೂಡ ಚಿತ್ರರಂಗದಿಂದಲೇ ಬಂದವರು ಎಂಬುದನ್ನು ಮರೆಯಬಾರದು ಎಂದು ಕಿಡಿಕಾರಿದರು.

ಕುಮಾರಸ್ವಾಮಿ ತಮ್ಮ ಜೀವನ ಪ್ರಾರಂಭಿಸಿದ್ದೂ ಚಿತ್ರರಂಗದಿಂದಲೇ. ಕುಮಾರಸ್ವಾಮಿಯವರ ಪ್ರೊಡಕ್ಷನ್ ಹೌಸ್ ನಲ್ಲಿ ನಾನೂ ಕೆಲಸ ಮಾಡಿದ್ದೇನೆ. ಸಿನಿಮಾ ತಾರೆಯರು ಬರೋದ್ರಿಂದ ಗೆಲ್ಲುವ ವಿಚಾರ ವೈಯಕ್ತಿಕ . ಸಿನಿಮಾದವರು ಗೆದ್ದು ಸಿಎಂ ಆಗಿದ್ದಾರೆ, ಅಮೆರಿಕದಲ್ಲಿ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು.












Click it and Unblock the Notifications